ಚೆಸ್: ‘ಡ್ರಾ’ ಪಂದ್ಯದಲ್ಲಿ ಪ್ರಜ್ಞಾನಂದ, ಕಾರ್ಲ್‌ಸನ್‌: ನಾಳೆ ಟೈಬ್ರೇಕ್‌ ಪಂದ್ಯ ಬಾಕು (ಅಜರ್‌ಬೈಜಾನ್‌): ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್‌ ಕಾರ್ಲ್‌ಸನ್‌ ಮತ್ತು ಭಾರತದ ಭರವಸೆಯ ಆಟಗಾರ ಆರ್‌.ಪ್ರಜ್ಞಾನಂದ ನಡುವಣ ವಿಶ್ವಕಪ್‌ ಚೆಸ್‌ ಟೂರ್ನಿಯ ಫೈನಲ್‌ನ ಎರಡನೇ ಪಂದ್ಯವೂ ಬುಧವಾರ ‘ಡ್ರಾ’ ಆಯಿತು. ಹೀಗಾಗಿ ವಿಜೇತ ಆಟಗಾರನನ್ನು ನಿರ್ಧರಿಸಲು ಗುರುವಾರ ಅಲ್ಪಾವಧಿಯ ಟೈಬ್ರೇಕ್‌ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ 35 ನಡೆಗಳನ್ನು ಕಂಡರೆ, ಎರಡನೇ ಪಂದ್ಯ ಕೇವಲ 30 ನಡೆಗಳಲ್ಲಿ ‘ಡ್ರಾ’ ಆಯಿತು. ಇಬ್ಬರೂ ಪಂದ್ಯವನ್ನು ಬೇಗ ಮುಗಿಸಲು ಮನಸ್ಸು ಬಯಸಿದಂತೆ ಕಂಡಿತು. ಬಿಳಿ ಕಾಯಿಗಳಲ್ಲಿ ಆಡಿದ ಕಾರ್ಲ್‌ಸನ್‌ ಹೆಚ್ಚಿನ ಸಾಹಸಕ್ಕೆ ಹೋಗಲಿಲ್ಲ. ಪ್ರಜ್ಞಾನಂದ ಕೂಡ ಸುರಕ್ಷಿತ ನಡೆಗಳನ್ನಿರಿಸಿದರು. ಇಬ್ಬರೂ 10ನೇ ನಡೆಯಲ್ಲಿ ಕ್ವೀನ್‌ ಕಳೆದುಕೊಂಡರು. ನಂತರವೂ ಎಕ್ಸ್‌ಚೇಂಜ್‌ಗಳು ಮುಂದುವರಿದವು. ‘ಡ್ರಾ’ಕ್ಕೆ ಸಹಿಹಾಕಿದಾಗ ಇಬ್ಬರ ಬಳಿಯೂ ಒಂದೇ ಬಣ್ಣದ ಚೌಕದಲ್ಲಿ ಸಾಗುವ ಬಿಷಪ್‌ಗಳ ಜೊತೆ ಆರು ಕಾಲಾಳುಗಳು ಇದ್ದವು. ‘ಎರಡು ದಿನಗಳ ಹಿಂದೆ ಹೊಟ್ಟೆ ಕೆಟ್ಟಿದ್ದು ವಿಶ್ರಾಂತಿ ಅಗತ್ಯವಿತ್ತು’ ಎಂದು ಮಂಗಳವಾರ ಮೊದಲ ಪಂದ್ಯದ ನಂತರ ಕಾರ್ಲ್‌ಸನ್‌ ಹೇಳಿದ್ದರು. ಐದು ದಿನಗಳ ಸತತ ಆಟದಿಂದ ಪ್ರಜ್ಞಾನಂದ ಕೂಡ ಸ್ವಲ್ಪ ಬಳಲಿದಂತೆ ಕಂಡರು. ‘ಅವರು ಇಂದು ಕ್ಷಿಪ್ರ ಡ್ರಾಕ್ಕೆ ಒಲವು ತೋರಿಸುವರೆಂದು ಅಂದುಕೊಂಡಿರಲಿಲ್ಲ. ಆದರೆ ಅವರು ಇಂದು ಆಡಿದ ರೀತಿಯಿಂದ ‘ಡ್ರಾ’ ಮಾಡಲು ಬಯಸಿದ್ದು ಮನವರಿಕೆಯಾಯಿತು. ನನಗೂ ಇದರಿಂದ ಸಮಸ್ಯೆ ಆಗಲಿಲ್ಲ’ ಎಂದು 18 ವರ್ಷದ ಪ್ರಜ್ಞಾನಂದ ಹೇಳಿದರು. ‌ವಿಶ್ವದ ಅಗ್ರಮಾನ್ಯ ಆಟಗಾರರನ್ನು ಎದುರಿಸುವ ಮೊದಲು ಪ್ರಜ್ಞಾನಂದ ಅವರು ಆ ಹಾದಿಯಲ್ಲಿ ಎರಡನೇ ಕ್ರಮಾಂಕದ ಹಿಕಾರು ನಕಾಮುರಾ ಮತ್ತು ಮೂರನೇ ಕ್ರಮಾಂಕದ ಫ್ಯಾಬಿಯಾನೊ ಕರುವಾನ ಅವರನ್ನು ಮಣಿಸಿದ್ದರು. 2024ರಲ್ಲಿ ಕೆನಡಾದಲ್ಲಿ ನಡೆಯುವ ಕ್ಯಾಂಡಿಡೇಟ್ಸ್‌ ಟೂರ್ನಿಯಲ್ಲೂ ಆಡುವ ಅರ್ಹತೆಯನ್ನು ‘ಪ್ರಗ್ಗು’ ಸಂಪಾದಿಸಿದ್ದಾರೆ. ಕ್ಯಾಂಡಿಡೇಟ್ಸ್‌ ಟೂರ್ನಿಯಲ್ಲಿ ವಿಜೇತನಾಗುವ ಆಟಗಾರ ವಿಶ್ವಚಾಂಪಿಯನ್‌ ಆಟಗಾರನಿಗೆ (ಪ್ರಸ್ತುತ ಡಿಂಗ್‌ ಲಿರೆನ್‌) ಸವಾಲಿಗನಾಗುವ ಅರ್ಹತೆ ಪಡೆಯುತ್ತಾನೆ. ಬಾಬಿ ಫಿಷರ್‌, ಮ್ಯಾಗ್ನಸ್‌ ಕಾರ್ಲ್‌ಸನ್‌ ನಂತರ ಕ್ಯಾಂಡಿಡೇಟ್ಸ್‌ ಟೂರ್ನಿಯಲ್ಲಿ ಆಡುವ ಮೂರನೇ ಅತಿ ಕಿರಿಯ ಆಟಗಾರ ಎನ್ನುವ ಹೆಗ್ಗಳಿಕೆಯೂ ಅವರದಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.