ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಮೂರನೇ ಸುತ್ತಿಗೆ ರಣಕಿರೆಡ್ಡಿ–ಚಿರಾಗ್‌ ಕೋಪೆನ್‌ಹೇಗನ್‌ (ಪಿಟಿಐ): ಭಾರತದ ಅಗ್ರಮಾನ್ಯ ಡಬಲ್ಸ್‌ ಆಟಗಾರರಾದ ಸಾತ್ವಿಕ್‌ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರು ಬುಧವಾರ ಆಸ್ಟ್ರೇಲಿಯಾದ ಎದುರಾಳಿ ಆಟಗಾರರನ್ನು ನೇರ ಗೇಮ್‌ಗಳಿಂದ ಸೋಲಿಸಿ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಮೂರನೇ ಸುತ್ತನ್ನು ಪ್ರವೇಶಿಸಿದರು. ಮಹಿಳೆಯರ ಡಬಲ್ಸ್ ಎರಡನೇ ಸುತ್ತಿನಲ್ಲಿ ಟ್ರಿಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್‌ ಕೂಡ ಉತ್ತಮ ಆಟ ಪ್ರದರ್ಶಿಸಿ ಚೀನಾ ತೈಪೆಯ ಎದುರಾಳಿಗಳನ್ನು ಸೋಲಿಸಿತು ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಸಾತ್ವಿಕ್‌–ಚಿರಾಗ್‌ ಜೋಡಿ ಅಚ್ಚುಕಟ್ಟಾದ ಆಟ ಪ್ರದರ್ಶಿಸಿ 21–16, 21–9 ರಿಂದ ಕೆನೆತ್‌ ಝೆಹೂಯಿ ಚೂ ಮತ್ತು ಮಿಂಗ್‌ ಚುಯೆನ್‌ ಲಿಮ್‌ ವಿರುದ್ಧ ಗೆಲ್ಲಲು ಕೇವಲ ಅರ್ಧಗಂಟೆ ತೆಗೆದುಕೊಂಡಿತು. ಹಾಲಿ ಕಾಮನ್‌ವೆಲ್ತ್‌ ಚಾಂಪಿಯನ್‌ ಆಗಿರುವ ಭಾರತದ ಜೋಡಿ ಈ ಋತುವಿನಲ್ಲಿ ನಾಲ್ಕು ಪ್ರಶಸ್ತಿಗಳನ್ನು ಗೆದ್ದು ಉತ್ತಮ ಲಯದಲ್ಲಿದೆ. ಮುಂದಿನ ಸುತ್ತಿನಲ್ಲಿ ಭಾರತ ಆಟಗಾರರು, ಹತ್ತನೇ ಶ್ರೇಯಾಂಕದ ಲಿಯೊ ರೋಲಿ ಕರ್ನಾಂಡೊ ಮತ್ತು ಡೇನಿಯರ್‌ ಮಾರ್ಟಿನ್‌ (ಇಂಡೊನೇಷ್ಯಾ) ಅವರನ್ನು ಎದುರಿಸಲಿದ್ದಾರೆ. ವಿಶ್ವ ಕ್ರಮಾಂಕದಲ್ಲಿರುವ 19ನೇ ಸ್ಥಾನದಲ್ಲಿರುವ ಗಾಯತ್ರಿ– ತ್ರಿಸಾ ಜೋಡಿ 21–18, 21–10 ರಿಂದ ಚೀನಾ ತೈಪೆಯ ಚಾಂಗ್‌ ಚಿಂಗ್‌ ಹುಯಿ– ಯಾಂಗ್‌ ಚಿಂಗ್‌ ಟುನ್ ಅವರನ್ನು ಸೋಲಿಸಿತು. ಪಂದ್ಯ ಗೆಲ್ಲಲು ಭಾರತದ ಆಟಗಾರ್ತಿಯರಿಗೆ 38 ನಿಮಿಷ ಹಿಡಿಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.