ಗ್ರ್ಯಾನ್‌ಪ್ರೀ ಬ್ಯಾಡ್ಮಿಂಟನ್ ಲೀಗ್ ಅನಿರ್ದಿಷ್ಠಾವಧಿಗೆ ಮುಂದೂಡಿಕೆ ಬೆಂಗಳೂರು: ಭಾನುವಾರದಿಂದ ಆರಂಭವಾಗಬೇಕಿದ್ದ ಗ್ರ್ಯಾನ್‌ಪ್ರೀ ಬ್ಯಾಡ್ಮಿಂಟನ್ ಲೀಗ್ ಟೂರ್ನಿಯಲ್ಲಿ ಆಡಲು ಕಳೆದ ಹಲವು ದಿನಗಳಿಂದ ಸಿದ್ಧತೆ ನಡೆಸಿದ್ದ ಆಟಗಾರರು ಶನಿವಾರ ಅಪಾರ ನಿರಾಶೆಯೊಂದಿಗೆ ತಮ್ಮ ತವರೂರುಗಳಿಗೆ ಮರಳಿದರು. ಆದರೆ ಎರಡನೇ ಆವೃತ್ತಿಯ ಜಿಪಿಬಿಎಲ್ ಟೂರ್ನಿಯನ್ನು ಅನಿರ್ದಿಷ್ಠಾವಧಿಯವರೆಗೆ ಮುಂದೂಡಿರುವುದೇ ಅವರ ಹತಾಶೆಗೆ ಕಾರಣ. ಭಾರತ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ)ಯು ಜಿಪಿಬಿಎಲ್‌ಗೆ ಮಾನ್ಯತೆ ನೀಡಲು ನಿರಾಕರಿಸಿತ್ತು. ಅದಕ್ಕಾಗಿ ಜಿಪಿಬಿಎಲ್ ಆಯೋಜಕ ಸಂಸ್ಥೆಯಾದ ಬಿಟ್‌ಸ್ಪೋರ್ಟ್ಸ್‌ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿತ್ತು. ಕೆಲವು ದಿನಗಳ ಹಿಂದೆ ಟೂರ್ನಿ ನಡೆಸಲು ಕೋರ್ಟ್ ಅನುಮತಿ ನೀಡಿತ್ತು. ಅದರಿಂದ ಆಯೋಜಕರು ಸಿದ್ಧತೆಯನ್ನು ನಡೆಸಿದ್ದರು. ಆಟಗಾರರ ಬಿಡ್‌ ಕೂಡ ನಡೆದಿತ್ತು. 80 ಆಟಗಾರರು ಆಡಲು ಆಯ್ಕೆಯಾಗಿದ್ದರು. ಆದರೆ ಟೂರ್ನಿಗೆ ತಡೆ ಕೋರಿದ್ದ ಬಿಎಐ ಅರ್ಜಿಯನ್ನು ರಾಜ್ಯ ಹೈಕೋರ್ಟ್ ಏಕಸದಸ್ಯ ಪೀಠವು ಶುಕ್ರವಾರ ವಿಚಾರಣೆ ಮಾಡಿತ್ತು. ಟೂರ್ನಿ ನಡೆಯಲಿ ಎಂದು ಹೇಳಿತ್ತು. ಕೋರ್ಟಿನ ವಿಭಾಗೀಯ ಪೀಠವು ಅಂತಿಮ ತೀರ್ಪು ನೀಡಲು ಸೆಪ್ಟೆಂಬರ್ 12ಕ್ಕೆ ವಿಚಾರಣೆ ನಡೆಸುವುದಾಗಿ ಹೇಳಿತ್ತು. ಮಿಥುನ್ ಮಂಜುನಾಥ್ ಹಾಗೂ ಬಿ.ಸಾಯಿಪ್ರಣೀತ್ ಸೇರಿ ಕೆಲವು ಪ್ರಮುಖ ಆಟಗಾರರು ಬಿಎಐ ‘ಎಚ್ಚರಿಕೆ‘ಗೆ ಹೆದರಿ ಹಿಂದೆ ಸರಿದಿದ್ದರಿಂದ ಆಯೋಜಕರು ಟೂರ್ನಿಯನ್ನು ಮುಂದೂಡಲು ನಿರ್ಧರಿಸಿದರು. ‘ಪ್ರಮುಖ ಆಟಗಾರರು ಹಿಂದೆ ಸರಿದಿರುವುದರಿಂದ ಟೂರ್ನಿಯನ್ನು ಅನಿರ್ದಿಷ್ಟಾಧಿಗೆ ಮುಂದೂಡಲಾಗುತ್ತಿದೆ. ನಮ್ಮ ಬಹಳಷ್ಟು ಪ್ರಯತ್ನಗಳ ನಂತರವೂ ಭಾರತ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ಟೂರ್ನಿಗೆ ಮಾನ್ಯತೆ ನೀಡಲು ಒಪ್ಪಲಿಲ್ಲ. ಈಗ ಬಿಎಐನ ಕೆಲವು ಪದಾಧಿಕಾರಿಗಳೂ ಮತ್ತು ಕೋಚ್‌ಗಳು ಖಾಸಗಿ ಲೀಗ್‌ನಲ್ಲಿ ಆಡಿದರೆ ಮುಂದೆ ಬೇರೆ ಟೂರ್ನಿಗಳಲ್ಲಿ ಆಡಲು ಅವಕಾಶ ನೀಡುವುದಿಲ್ಲವೆಂದು ಆಟಗಾರರಿಗೆ ಬೆದರಿಕೆ ಒಡ್ಡಿದ್ದಾರೆ. ಇದರಿಂದಾಗಿ ಆಟಗಾರರು ಹಿಂದೆ ಸರಿದಿದ್ದಾರೆ. ಆದರೆ ಬಿಎಐ ವಿರುದ್ಧ ನಿಲ್ಲುವ ಉದ್ದೇಶ ನಮಗಿಲ್ಲ. ಅವರೊಂದಿಗೆ ಜೊತೆಗೂಡಿ ಮುಂದುವರಿಯುವ ಆಸೆಯಿದೆ. ಬಿಎಐ ಜೊತೆಗೆ ಮಾತುಕತೆ ಮುಂದುವರಿಸುತ್ತೇವೆ. ಅವರ ಮನವೊಲಿಸಿ ಆದಷ್ಟು ಶೀಘ್ರದಲ್ಲಿ ಟೂರ್ನಿಯನ್ನು ಆಯೋಜಿಸಲು ಪ್ರಯತ್ನಿಸುತ್ತೇವೆ’ ಎಂದು ಲೀಗ್‌ ಕಮಿಷನರ್ ಪ್ರಶಾಂತ್ ರೆಡ್ಡಿ ಹೇಳಿದರು. ಶನಿವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಭಾರತದಲ್ಲಿ ಬ್ಯಾಡ್ಮಿಂಟನ್ ಬೆಳವಣಿಗೆಗೆ ಇಂತಹ ಲೀಗ್‌ಗಳ ಅವಶ್ಯಕತೆ ಇದೆ. ಬ್ಯಾಡ್ಮಿಂಟನ್ ಕ್ರೀಡೆಯು ಬಹಳ ದುಬಾರಿಯದ್ದು. ದೇಶದ ಅಗ್ರಮಾನ್ಯ 8–10 ಆಟಗಾರರು ಮಾತ್ರ ಉತ್ತಮ ಸೌಲಭ್ಯಗಳನ್ನು ಪಡೆಯುತ್ತಾರೆ. ಮಧ್ಯಮವರ್ಗದ ಮತ್ತು ಬಡ ಕುಟುಂಬದ ಮಕ್ಕಳು ಈ ಕ್ರೀಡೆಯಲ್ಲಿ ಬೆಳೆಯಲು ಹರಸಾಹಸ ಪಡಬೇಕು. ಬಿಎಐ ಅಥವಾ ರಾಜ್ಯ ಸಂಸ್ಥೆಗಳಿಗೆ ಜೂನಿಯರ್ ಹಂತದಲ್ಲಿ ಧನಸಹಾಯ ಮತ್ತಿತರ ಸೌಲಭ್ಯಗಳು ಸಿಗುವುದಿಲ್ಲ. ಕೆಲವು ಟೂರ್ನಿಗಳಲ್ಲಿ ಗೆದ್ದರೆ ಮಾತ್ರ ನಗದು ಬಹುಮಾನ ಸಿಗುತ್ತದೆ. ಥಾಮಸ್‌ ಕಪ್‌ ಗೆದ್ದ ಆಟಗರರಿಗೇ ತಲಾ ₹ 10 ಲಕ್ಷ ನೀಡಲಾಗಿತ್ತು. ಅಂತಹದ್ದರಲ್ಲಿ ನಮ್ಮ ಲೀಗ್‌ನಲ್ಲಿ ₹ 15 ಲಕ್ಷದವರೆಗೂ ಆಟಗಾರರು ಮೌಲ್ಯ ಗಳಿಸಿದ್ದರು. ಇದು ಅವರ ಭವಿಷ್ಯಕ್ಕೆ ನೆರವಾಗುತ್ತದೆ’ ಎಂದು ರೆಡ್ಡಿ ವಿವರಿಸಿದರು. ‘ಬೇರೆ ದೇಶಗಳಲ್ಲಿ ಕ್ಲಬ್ ಮತ್ತು ಲೀಗ್‌ ಸುತ್ತಮುತ್ತಲೇ ಬ್ಯಾಡ್ಮಿಂಟನ್ ಚಟುವಟಿಕೆಗಳು ಕೇಂದ್ರಿಕೃತವಾಗಿವೆ. ಆದರೆ ನಮ್ಮಲ್ಲಿ ಸಂಸ್ಥೆ, ಫೆಡರೇಷನ್‌ ಪಾರಮ್ಯ ವಹಿಸುತ್ತಿವೆ. ಹೆಚ್ಚು ಲೀಗ್ ಟೂರ್ನಿಗಳು ನಡೆದರೆ ಆಟಗಾರರಿಗೆ ಮಾಧ್ಯಮದ ಪ್ರಚಾರ ಸಿಗುತ್ತದೆ. ಆಟವು ನೇರಪ್ರಸಾರಗಳಿಂದ ಹೆಚ್ಚು ಜನಪ್ರಿಯವಾಗುತ್ತದೆ. ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಕೂಡ ಸ್ಥಗಿತವಾಗಿ ನಾಲ್ಕು ವರ್ಷಗಳು ಕಳೆದಿವೆ. ‘ ಎಂದರು. ಬಿಡ್‌ನಲ್ಲಿ ಮಿಥುನ್ ₹14.5 ಲಕ್ಷ ಕ್ಕೆ ಚೆನ್ನೈ ಸೂಪರ್‌ಸ್ಟಾರ್ಜ್ ಮತ್ತು ಪ್ರಣೀತ್ ₹ 10 ಲಕ್ಷಕ್ಕೆ ನಾರ್ಥ್‌ಈಸ್ಟ್‌ ರೈನೊಸ್‌ ತಂಡಕ್ಕೆ ಸೇರ್ಪಡೆಯಾಗಿದ್ದರು. ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಮಾಜಿ ಆಟಗಾರ ಅರವಿಂದ್ ಭಟ್, ‘ಇನ್ನು ಮುಂದೆ ದೇಶದಲ್ಲಿ ಬ್ಯಾಡ್ಮಿಂಟನ್ ಲೀಗ್‌ಗಳು ನಡೆಯುತ್ತವೆ ಎನ್ನುವುದು ಖಚಿತವಿಲ್ಲ. ಇದರಿಂದಾಗಿ ಪ್ರತಿಭಾವಂತರು ಅವಕಾಶವಂಚಿತರಾಗಬಹುದು‘ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.