ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಪ್ರಣಯ್ ಕೊರಳಿಗೆ ಕಂಚು ಕೊಪನ್‌ಹೆಗನ್: ಭಾರತದ ಎಚ್‌.ಎಸ್. ಪ್ರಣಯ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಪಡೆದರು. ಶನಿವಾರ ನಡೆದ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್‌ನ ಕುನ್ಲಾವತ್ ವಿತಿದ್‌ಸರನ್ 18–21, 21–13, 21–14 ಗೇಮ್‌ಗಳಿಂದ ಪ್ರಣಯ್ ಅವರನ್ನು ಪರಾಭವಗೊಳಿಸಿದರು. 76 ನಿಮಿಷಗಳ ಹೋರಾಟದಲ್ಲಿ ಪ್ರಣಯ್ ಉತ್ತಮ ಆರಂಭವನ್ನೇ ಮಾಡಿದರು. ಮೊದಲ ಗೇಮ್‌ನಲ್ಲಿ ಮೂರು ಅಂಕಗಳ ಅಂತರದಿಂದ ಜಯಗಳಿಸಿದರು. ಆದರೆ ಇದೇ ಲಯವನ್ನು ಇನ್ನುಳಿದ ಎರಡು ಗೇಮ್‌ಗಳಲ್ಲ ಉಳಿಸಿಕೊಳ್ಳಲಿಲ್ಲ. ಕುನ್ಲಾವತ್ ಪುಟಿದೆದ್ದರು. ಆತ್ಮವಿಶ್ವಾಸಭರಿತ ಆಟವಾಡಿದ ಅವರು ಪಾರಮ್ಯ ಮೆರೆದರು. ಮೂರನೇ ರ‍್ಯಾಂಕ್‌ ಆಟಗಾರ ಕುನ್ಲಾವತ್ ಅವರು ಎರಡು ಗೇಮ್‌ಗಳಲ್ಲಿ ಆಡಿದ ಕರಾರುವಾಕ್ ರ‍್ಯಾಲಿಗಳಿಗೆ ತಕ್ಕ ಪ್ರತ್ಯುತ್ತರ ನೀಡುವಲ್ಲಿ 9ನೇ ಶ್ರೇಯಾಂಕದ ಪ್ರಣಯ್ ಎಡವಿದರು. ನೆಟ್‌ ಬಳಿಯ ಆಟದಲ್ಲಿಯೂ ವಿಫಲರಾದರು. ಇದರಿಂದಾಗಿ ಪಾಯಿಂಟ್‌ ಕಳೆದುಕೊಂಡರು. ಮೂರನೇ ಗೇಮ್‌ನಲ್ಲಿ ಪ್ರಣಯ್ 12–15ರ ಅಂತರದಲ್ಲಿದ್ದಾಗ ಪುಟಿದೇಳುವ ಅವಕಾಶ ಇತ್ತು. ಆದರೆ, ಸತತ ಮೂರು ಅಂಕಗಳನ್ನು ಗಳಿಸಿದ ಥಾಯ್ಲೆಂಡ್ ಆಟಗಾರ ಅಂತರವನ್ನು ಹೆಚ್ಚಿಸಿದರು. ನಂತರದ ಆಟದಲ್ಲಿ ಪ್ರಣಯ್‌ಗೆ ಮರಳಿ ಜಯದ ಸನಿಹಕ್ಕೆ ಸಾಗುವ ಅವಕಾಶ ಸಿಗಲಿಲ್ಲ. ಪುರುಷರ ಡಬಲ್ಸ್, ಮಹಿಳೆಯರ ಸಿಂಗಲ್ಸ್‌ಗಳಲ್ಲಿ ಈ ಬಾರಿ ಭಾರತಕ್ಕೆ ಪದಕ ಒಲಿಯಲಿಲ್ಲ. ಆದರೆ ಪುರುಷರ ಸಿಂಗಲ್ಸ್‌ನಲ್ಲಿ ಪದಕ ಜಯಿಸಿದ ಏಕೈಕ ಆಟಗಾರನಾಗಿ ಪ್ರಣಯ್ ಹೊರಹೊಮ್ಮಿದರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪ್ರಕಾಶ್ ಪಡುಕೋಣೆ, ಕೆ. ಶ್ರೀಕಾಂತ್, ಲಕ್ಷ್ಯ ಸೇನ್ ಹಾಗೂ ಸಾಯಿಪ್ರಣೀತ್ ಅವರ ನಂತರ ಪದಕ ಜಯಿಸಿದ ಭಾರತದ ಆಟಗಾರನೆಂಬ ಶ್ರೇಯಕ್ಕೂ ಪ್ರಣಯ್ ಪಾತ್ರರಾದರು. ಫೈನಲ್‌ಗೆ ಮರಿನ್: ಸ್ಪೇನ್‌ ದೇಶದ ಕರೊಲಿನಾ ಮರೀನ್ ಮಹಿಳೆಯರ ಸಿಂಗಲ್ಸ್ ಫೈನಲ್ ಪ್ರವೇಶಿಸಿದರು. ಸೆಮಿಫೈನಲ್‌ನಲ್ಲಿ ಮರಿನ್ 23–21, 21–13ರಿಂದ ಜಪಾನ್ ತಂಡದ ಅಕಾನೆ ಯಮಗುಚಿ ವಿರುದ್ಧ ಗೆದ್ದರು. 53 ನಿಮಿಷಗಳವರೆಗೆ ನಡೆದ ಹೋರಾಟದಲ್ಲಿ 2016ರ ಒಲಿಂಪಿಕ್ ಚಾಂಪಿಯನ್ ಮರಿನ್ ಮೇಲುಗೈ ಸಾಧಿಸಿದರು. ಇನ್ನೊಂದು ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾದ 21–19, 21–15ರಿಂದ ಚೀನಾದ ಚೆನ್ ಯೂ ಫೀ ವಿರುದ್ಧ ಜಯಿಸಿದರು. ಅವರು ಫೈನಲ್‌ನಲ್ಲಿ ಮರಿನ್ ವಿರುದ್ಧ ಆಡುವರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.