ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌: ಕಿಪ್ಲಾಂಗಟ್‌ಗೆ ಮ್ಯಾರಥಾನ್‌ ಚಿನ್ನ ಬುಡಾ‍ಪೆಸ್ಟ್‌ (ಎಎಫ್‌ಪಿ): ಕೊನೆಯ 15 ಕಿ.ಮೀ.ಗಳಿರುವಾಗ ಎದುರಾಳಿಗಳನ್ನೆಲ್ಲಾ ಹಿಂದೆಹಾಕಿದ ಉಗಾಂಡಾದ ವಿಕ್ಟರ್‌ ಕಿಪ್ಲಾಂಗಟ್‌ ಅವರು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಪುರುಷರ ಮ್ಯಾರಥಾನ್‌ನಲ್ಲಿ ವಿಜಯಿಯಾದರು. ಹಂಗೆರಿ ರಾಜಧಾನಿಯ ರಸ್ತೆಗಳಲ್ಲಿ ಭಾನುವಾರ ನಡೆದ ಈ ಸುದೀರ್ಘ ಓಟವನ್ನು 2ಗಂಟೆ 8 ನಿಮಿಷ 53 ಸೆಕೆಂಡುಗಳಲ್ಲಿ ಮುಗಿಸಿದರು. ಇಥಿಯೋಪಿಯಾ ಸಂಜಾತ ಇಸ್ರೇಲ್‌ನ ಓಟಗಾರ ಮಾರು ತೆಫಾರಿ 2ಗಂ. 9ನಿ. 12 ಸೆ.ಗಳಲ್ಲಿ ಓಟ ಪೂರೈಸಿ ಎರಡನೇ ಸ್ಥಾನ ಪಡೆದರು. ಏಳು ಸೆಕೆಂಡು ಹೆಚ್ಚು ತೆಗೆದುಕೊಂಡ ಇಥಿಯೋಪಿಯಾದ ಲಿಯುಲ್ ಗೆಬ್ರೆಸಿಲಾಸೆ ಅವರಿಗೆ ಕಂಚಿನ ಪದಕ ದೊರೆಯಿತು. ‘ಚಿನ್ನದ ಪದಕ ನನ್ನ ಕನಸಾಗಿತ್ತು. ಅದು ಕೊನೆಗೂ ನನಸಾಗಿದೆ’ ಎಂದು ಕಿಪ್ಲಾಂಗಟ್ ಪ್ರತಿಕ್ರಿಯಿಸಿದರು. ‘ಕಳೆದ ವರ್ಷ ನಾನು ಕಾಮನ್ವೆಲ್ತ್ ಚಾಂಪಿಯನ್ ಆಗಿದ್ದೆ. ಆಗಲೇ ನನಗೆ ಈ ವರ್ಷ ವಿಶ್ವ ಚಾಂಪಿಯನ್‌ ಆಗಬೇಕೆಂಬ ಬಯಕೆ ಮೂಡಿತು. ನನ್ನ ಪ್ರಾರ್ಥನೆ ಫಲಿಸಿದೆ. ಮುಂದಿನ ವರ್ಷ ಪ್ಯಾರಿಸ್‌ನಲ್ಲೂ ಒಲಿಂಪಿಕ್‌ ಚಾಂಪಿಯನ್‌ ಆಗುವ ವಿಶ್ವಾಸವಿದೆ’ ಎಂದರು. ‘ತುಂಬಾ ಬಿಸಿಲಿತ್ತು. ಆದರೆ ಇಂಥ ಸೆಕೆಯಲ್ಲಿ ಓಡಲು ಸಾಕಷ್ಟು ಸಿದ್ಧತೆ ನಡೆಸಿದ್ದರಿಂದ ನನಗೇನೂ ಸಮಸ್ಯೆಯಾಗಲಿಲ್ಲ. ಸಾಕಷ್ಟು ತರಬೇತಿ ಪಡೆದಿದ್ದ ಕಾರಣ ನನಗೆ ಸುಲಭವಾಯಿತು’ ಎಂದು 23 ವರ್ಷದ ಓಟಗಾರ ಹೇಳಿದರು. ಮೊದಲ ಸುಮಾರು 30 ಕಿ.ಮೀ. ವರೆಗೆ ಕಿಪ್ಲಾಂಗಟ್ ಅವರಿಗೆ ಸ್ವದೇಶದ ಸ್ಟೀಫನ್ ಕಿಸ್ಸಾ, ಇಥಿಯೋಪಿಯಾದ ಗೆಬ್ರೆಸಿಲಾಸೆ, ಸೆಗಾವೆ ಗೆಟಾಚ್ಯು, ತಮಿರತ್‌ ತೊಲಾ, ಕೆನ್ಯಾದ ತಿಮೋತಿ ಕಿಪ್ಲಾಂಗಟ್ ಅವರಿಂದ ಪೈಪೋಟಿ ಎದುರಾಗಿತ್ತು. ತಮಿರತ್‌ ತೊಲಾ ಕಳೆದ ಸಲ ಯುಜೀನ್‌ನಲ್ಲಿ ನಡೆದ ಕೂಟದಲ್ಲಿ ಚಾಂಪಿಯನ್ ಆಗಿದ್ದರು. ‘ಹೊಟ್ಟೆನೋವಿನಿಂದ ನಾನು ಓಟ ಮುಗಿಸಲು ಆಗಲಿಲ್ಲ’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.