ವಿಶ್ವ ಟೆಂಟ್‌ ಪೆಗ್ಗಿಂಗ್: ಭಾರತ ಚಾರಿತ್ರಿಕ ಸಾಧನೆ ಜಾರ್ಜ್, ದಕ್ಷಿಣ ಆಫ್ರಿಕಾ (ಪಿಟಿಐ): ಭಾರತ ತಂಡವು ಇಲ್ಲಿ ನಡೆದ ಟೆಂಟ್‌ ಪೆಗ್ಗಿಂಗ್ ವಿಶ್ವಕಪ್‌ ನಲ್ಲಿ ಚಾರಿತ್ರಿಕ ಸಾಧನೆ ಮಾಡಿತು. ಈ ಕ್ರೀಡೆಯಲ್ಲಿ ಇದೇ ಮೊದಲ ಬಾರಿಗೆ ಮೂರನೇ ಸ್ಥಾನ ಗಳಿಸಿತು. ಟೆಂಟ್ ಪೆಗ್ಗಿಂಗ್ ಎಂದರೆ ನೆಲದಲ್ಲಿ ನೆಟ್ಟಿರುವ ಮರದ ಗೂಟಗಳನ್ನು ವೇಗವಾಗಿ ಓಡುವ ಕುದುರೆ ಮೇಲಿರುವ ಸವಾರನು ಭರ್ಜಿಯಿಂದ ಚುಚ್ಚಿ ತೆಗೆದುಕೊಂಡು ಸಾಗುವ ಸಾಹಸ ಕ್ರೀಡೆಯಾಗಿದೆ. ಭಾರತ ತಂಡವು ಕಳೆದ ಎರಡು ಆವೃತ್ತಿಗಳಲ್ಲಿ ಕ್ರಮವಾಗಿ ಆರು ಮತ್ತು ಏಳನೇ ಸ್ಥಾನಗಳನ್ನು ಗಳಿಸಿತ್ತು. ಈ ಬಾರಿ ಐವರು ಸವಾರರು ಇದ್ದ ತಂಡವು ಕಣದಲ್ಲಿತ್ತು. ದಿನೇಶ್ ಗಂಗಾರಾಮ್ ಕರ್ಲೇಕರ್ (4 ಅಂಕ), ಮೋಹಿತ್ ಕುಮಾರ್ (06 ಅಂಕ), ಅಮಿತ್ ಚೆಟ್ರಿ (12 ಅಂಕ), ಮೊಹಮ್ಮದ್ ಅಬ್ರಾರ್ (31 ಅಂಕ) ಮತ್ತು ಗೌತಮ್ ಕುಮಾರ್ ಆಟಾ (38 ಅಂಕ) ಉತ್ತಮ ಸಾಧನೆ ಮಾಡಿದರು. ಅಂತರರಾಷ್ಟ್ರೀಯ ಟೆಂಟ್‌ ಪೆಗ್ಗಿಂಗ್ ಫೆಡರೇಷನ್‌ನಲ್ಲಿ 29 ರಾಷ್ಟ್ರಗಳು ಸದಸ್ಯತ್ವ ಹೊಂದಿವೆ. ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಳಿಸಿದ ತಂಡಗಳನ್ನು ತಲಾ ನಾಲ್ಕು ತಂಡಗಳಿರುವ ಗುಂಪುಗಳಲ್ಲಿ ವಿಂಗಡಿಸಲಾಗುತ್ತದೆ. ಈ ಬಾರಿ ಓಮನ್‌ನಲ್ಲಿ ನಡೆದಿದ್ದ ಫೆಡರೇಷನ್ ಸರ್ವಸದಸ್ಯರ ಸಭೆಯಲ್ಲಿ ಗುಂಪುಗಳನ್ನು ಪ್ರಕಟಿಸಲಾಗಿತ್ತು. ಭಾರತ ತಂಡವು ಡಿ ಗುಂಪಿನಲ್ಲಿತ್ತು. ಜನವರಿಯಲ್ಲಿ ಸೂಡಾನ್‌ನಲ್ಲಿ ನಡೆದಿದ್ದ ಕ್ವಾಲಿಫೈಯರ್‌ನಲ್ಲಿ ಭಾರತವು ಉತ್ತಮ ಅಂಕಗಳನ್ನು ಗಳಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.