ಏಷ್ಯನ್‌ ಗೇಮ್ಸ್‌ ಚೆಸ್‌ ಶಿಬಿರಕ್ಕೆ ಪ್ರಜ್ಞಾನಂದ, ಗುಕೇರ್ಶ ಕೋಲ್ಕತ್ತ: ಚೆಸ್‌ ತಾರೆ ಆರ್.ಪ್ರಜ್ಞಾನಂದ, ಡಿ.ಗುಕೇಶ್ ಅವರನ್ನು ಒಳಗೊಂಡಂತೆ ಏಷ್ಯನ್‌ ಗೇಮ್ಸ್‌ನಲ್ಲಿ ಭಾಗವಹಿಸುವ ಭಾರತ ಚೆಸ್‌ ತಂಡಕ್ಕೆ ಆಗಸ್ಟ್‌ 30 ರಿಂದ ಇಲ್ಲಿ ನಾಲ್ಕು ದಿನಗಳ ತಂತ್ರಗಾರಿಕೆ ಶಿಬಿರ (ಟ್ಯಾಕ್ಟಿಕಲ್‌ ಕ್ಯಾಂಪ್‌) ನಡೆಯಲಿದೆ. ಗ್ರ್ಯಾಂಡ್‌ಮಾಸ್ಟರ್‌ಗಳಾದ ವಿದಿತ್‌ ಗುಜರಾತಿ, ಅರ್ಜುನ್‌ ಎರಿಗೇಶಿ, ಆರ್‌.ಗುಕೇಶ್ ಜೊತೆಗೆ ಅನುಭವಿ ಪಿ.ಹರಿಕೃಷ್ಣ ಅವರು ಭಾರತ ತಂಡದಲ್ಲಿ ಇದ್ದಾರೆ. ಇವರಲ್ಲಿ ಪ್ರಜ್ಞಾನಂದ ಜೊತೆ ಮೊದಲ ಮೂವರು ಇತ್ತೀಚೆಗೆ ಬಾಕುವಿನಲ್ಲಿ ನಡದ ವಿಶ್ವಕಪ್‌ ಟೂರ್ನಿಯಲ್ಲಿ ಎಂಟರ ಘಟ್ಟ ತಲುಪಿ ಗಮನ ಸೆಳೆದಿದ್ದರು. ಪ್ರಜ್ಞಾನಂದ ಫೈನಲ್‌ ಟೈಬ್ರೇಕರ್‌ನಲ್ಲಿ ಸೋತಿದ್ದರು. ಏಷ್ಯನ್‌ ಗೇಮ್ಸ್‌ ಚೆಸ್‌ ತಂಡಕ್ಕೆ ವಿಶ್ವಪ್ರಸಿದ್ಧ ಮಾಜಿ ಆಟಗಾರ ಬೋರಿಸ್‌ ಗೆಲ್ಫಾಂಡ್ ಅವರು ಹೆಡ್‌ ಕೋಚ್‌ ಆಗಿದ್ದಾರೆ. ಶ್ರೀನಾಥ್‌ ನಾರಾಯಣನ್, ಕೋಚ್‌ ಆಗಿದ್ದು, ವೈಭವ್ ಸೂರಿ, ಅರ್ಜುನ್ ಕಲ್ಯಾಣ್ ಸಹಾಯಕ ಕೋಚ್‌ಗಳಾಗಿದ್ದಾರೆ. ಮಹಿಳೆಯರ ತಂಡದಲ್ಲಿ ಜಿಎಂ ಕೊನೇರು ಹಂಪಿ, ದ್ರೋಣವಲ್ಲಿ ಹಾರಿಕಾ, ವೈಶಾಲಿ ರಮೇಶಬಾಬು, ವಂತಿಕಾ ಅಗರವಾಲ್ ಹಾಗೂ ಸವಿತಾಶ್ರೀ ಇದ್ದಾರೆ. ಕೋಲ್ಕತ್ತದಲ್ಲಿ ಆ. 31 ರಿಂದ ಟಾಟಾ ಸ್ಟೀಲ್‌ ಚೆಸ್‌ ಇಂಡಿಯಾ ರ್‍ಯಾಪಿಡ್ ಮತ್ತು ಬ್ಲಿಟ್ಸ್‌ ಟೂರ್ನಿಗಳು ನಡೆಯಲಿದ್ದು, ಆ ವೇಳೆಯೇ ಶಿಬಿರವೂ ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.