ಜಿಪಿಬಿಎಲ್‌: ಹೈಕೋರ್ಟ್ ಅನುಮತಿ ಬೆಂಗಳೂರು: ಗ್ರ್ಯಾನ್‌ ಪ್ರಿ ಬ್ಯಾಡ್ಮಿಂಟನ್ ಲೀಗ್ (ಜಿಪಿಬಿಎಲ್‌) ಟೂರ್ನಿಯಲ್ಲಿ ಆಡಲು ಆಟಗಾರರಿಗೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ಭಾರತ ಬ್ಯಾಡ್ಮಿಂಟನ್ ಸಂಸ್ಥೆಗೆ (ಬಿಎಐ) ನೋಂದಾಯಿತ ಆಟಗಾರರು ಜಿಪಿಬಿಎಲ್‌ನಲ್ಲಿ ಪಾಲ್ಗೊಳ್ಳಬಹುದು ಎಂದು ನ್ಯಾಯಮೂರ್ತಿ ಆರ್‌.ದೇವದಾಸ್ ಅವರಿದ್ದ ಏಕಸದಸ್ಯ ಪೀಠ ಗುರುವಾರ ತೀರ್ಪು ನೀಡಿತ್ತು. ಇದಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಬಿಎಐ ಮೇಲ್ಮನವಿ ಸಲ್ಲಿಸಿತ್ತು. ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿದ ಎಸ್‌.ಜಿ.ಪಂಡಿತ್‌ ಮತ್ತು ಪ್ರದೀಪ್‌ ಸಿಂಗ್ ಯೆರೂರು ಅವರಿದ್ದ ಹೈಕೋರ್ಟ್‌ನ ವಿಶೇಷ ವಿಭಾಗೀಯ ನ್ಯಾಯಪೀಠ, ಏಕಸದಸ್ಯ ಪೀಠದ ಆದೇಶಕ್ಕೆ ತಡೆನೀಡಲು ನಿರಾಕರಿಸಿದೆ. ಏಕಸದಸ್ಯ ಪೀಠದ ಆದೇಶವು ಈಗ ವಿಭಾಗೀಯ ಪೀಠದ ಮುಂದಿರುವ ಮೇಲ್ಮನವಿ ಅರ್ಜಿಯ ಅಂತಿಮ ಫಲಿತಾಂಶಕ್ಕೆ ಒಳಪಟ್ಟಿರುತ್ತದೆ ಎಂದು ಹೈಕೋರ್ಟ್ ಹೇಳಿದೆ. ಮುಂದಿನ ವಿಚಾರಣೆ ಸೆ.12ಕ್ಕೆ ನಡೆಯಲಿದೆ. ವಿಭಾಗೀಯ ಪೀಠದ ಆದೇಶದಿಂದ, ಜಿಪಿಬಿಎಲ್‌ ಟೂರ್ನಿಯನ್ನು ನಿಗದಿತ ವೇಳಾಪಟ್ಟಿಯಂತೆ ನಡೆಸಲು ಆಯೋಜಕರಿಗೆ ಅವಕಾಶ ಲಭಿಸಿದೆ. ಈ ಟೂರ್ನಿ ಆ.27 ರಿಂದ ಸೆ.8ರ ವರೆಗೆ ನಡೆಯಲಿದ್ದು, ಒಟ್ಟು ಎಂಟು ತಂಡಗಳು ಪಾಲ್ಗೊಳ್ಳಲಿವೆ. ‘ನಿಗದಿತ ವೇಳಾಪಟ್ಟಿಯಂತೆ ಟೂರ್ನಿಯನ್ನು ನಡೆಸುವುದರಿಂದ ಆಯೋಜಕರನ್ನು ತಡೆಯುವುದಿಲ್ಲ. ಹರಾಜಿನಲ್ಲಿ ಪಾಲ್ಗೊಂಡು ಆಯ್ಕೆಯಾದವರು ಟೂರ್ನಿಯಲ್ಲಿ ಪಾಲ್ಗೊಳ್ಳಬಹುದು’ ಎಂದು ಏಕಸದಸ್ಯ ಪೀಠ ಗುರುವಾರ ಹೇಳಿತ್ತು. ನೋಂದಾಯಿತ ಆಟಗಾರರು ಖಾಸಗಿ ಲೀಗ್‌ಗಳಲ್ಲಿ ಆಡುವಂತಿಲ್ಲ ಎಂದು ಆದೇಶಿಸಿದ್ದ ಬಿಎಐ, ಏಪ್ರಿಲ್‌ ತಿಂಗಳಿನಲ್ಲಿ ಎಲ್ಲ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಗಳಿಗೆ ಸುತ್ತೋಲೆ ಕಳಿಸಿತ್ತು. ಜಿಪಿಬಿಎಲ್ ಆಯೋಜಕರಾದ ಬಿಟ್‌ಸ್ಪೋರ್ಟ್ ಪ್ರೈವೇಟ್‌ ಲಿಮಿಟೆಡ್ ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿತ್ತು. ಬಿಎಐ ಏ.10 ಮತ್ತು ಜುಲೈ 5 ರಂದು ಹೊರಡಿಸಿದ್ದ ಸುತ್ತೋಲೆಗಳಿಗೆ ಹೈಕೋರ್ಟ್‌ ಜುಲೈ 21ರಂದು ತಡೆಯಾಜ್ಞೆ ತಂದಿತ್ತು. ಇದರಿಂದ ಆಯೋಜಕರು ಆಟಗಾರರ ಹರಾಜು ಪ್ರಕ್ರಿಯೆಯನ್ನು ನಡೆಸಿದ್ದರು. ವಿದೇಶದ 54 ಮಂದಿ ಸೇರಿದಂತೆ ಒಟ್ಟು 457 ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲು ನೋಂದಣಿ ಮಾಡಿಸಿದ್ದರು. ಅದರಲ್ಲಿ 150 ಮಂದಿಯ ಹೆಸರನ್ನು ಹರಾಜು ಪ್ರಕ್ರಿಯೆಗೆ ಅಂತಿಮಗೊಳಿಸಲಾಗಿತ್ತು. ಹರಾಜಿನಲ್ಲಿ ಒಟ್ಟು 80 ಮಂದಿ ಆಯ್ಕೆಯಾಗಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.