ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಸಾತ್ವಿಕ್‌–ಚಿರಾಗ್‌ ಜೋಡಿಗೆ ನಿರಾಸೆ ಕೋಪೆನ್‌ಹೇಗನ್: ಭಾರತದ ಪದಕದ ಭರವಸೆ ಎನಿಸಿದ್ದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಜೋಡಿ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದರು. ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತದ ಜೋಡಿ 18–21, 19–21 ರಿಂದ ಡೆನ್ಮಾರ್ಕ್‌ನ ಕಿಮ್‌ ಆಸ್ಟ್ರಪ್‌– ಆ್ಯಂಡರ್ಸ್ ಸ್ಕಾರುಪ್ ರಸ್ಮುಸೆನ್‌ ಎದುರು ಪರಾಭವಗೊಂಡಿತು. ವಿಶ್ವ ರ್‍ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಸಾತ್ವಿಕ್‌– ಚಿರಾಗ್‌ ಅವರು 2021ರ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದುಕೊಂಡಿದ್ದರು. ಸತತ ಎರಡನೇ ಪದಕ ಗೆಲ್ಲಬೇಕೆಂಬ ಅವರ ಆಸೆ ಈಡೇರಲಿಲ್ಲ. ಡೆನ್ಮಾರ್ಕ್‌ ಜೋಡಿ 48 ನಿಮಿಷಗಳಲ್ಲಿ ಜಯಿಸಿ ಸೆಮಿಫೈನಲ್‌ಗೆ ಮುನ್ನಡೆಯಿತು. ಮೊದಲ ಗೇಮ್‌ನ ಆರಂಭದಲ್ಲೇ 5–1 ರಿಂದ ಮುನ್ನಡೆ ಸಾಧಿಸಿದ ಕಿಮ್‌– ಆ್ಯಂಡರ್ಸ್, ಎದುರಾಳಿಗಳ ಮೇಲೆ ಒತ್ತಡ ಹೇರಿದರು. ಆ ಬಳಿಕ 11–6, 15–9 ರಲ್ಲಿ ಮೇಲುಗೈ ಪಡೆದರು. ಚಿರಾಗ್‌ ಅವರು ಲಯ ಕಂಡುಕೊಳ್ಳಲು ಪರದಾಡಿದರೂ, ಸಾತ್ವಿಕ್‌ ಕೆಲವೊಂದು ಬಿರುಸಿನ ಸ್ಮ್ಯಾಷ್‌ಗಳ ಮೂಲಕ ಪಾಯಿಂಟ್ಸ್‌ ಕಲೆಹಾಕಿದರು. ಭಾರತದ ಜೋಡಿ ಹಿನ್ನಡೆಯನ್ನು 15–18ಕ್ಕೆ ತಗ್ಗಿಸಿದರೂ, ಡೆನ್ಮಾರ್ಕ್‌ ಆಟಗಾರರು ಶಿಸ್ತಿನ ಆಟವಾಡಿ ಮೊದಲ ಗೇಮ್‌ ಗೆದ್ದುಕೊಂಡರು. ಎರಡನೇ ಗೇಮ್‌ನ ಆರಂಭದಲ್ಲಿ 3–1 ಮತ್ತು 9–4 ರಲ್ಲಿ ಮೇಲುಗೈ ಸಾಧಿಸಿದ ಡೆನ್ಮಾರ್ಕ್‌ ಆಟಗಾರರು, ಸಾತ್ವಿಕ್‌–ಚಿರಾಗ್‌ಗೆ ಮರುಹೋರಾಟ ನಡೆಸಲು ಅವಕಾಶ ನೀಡಲಿಲ್ಲ. ಆದರೆ ಚಿರಾಗ್‌ ಅವರ ಉತ್ತಮ ಸ್ಮ್ಯಾಷ್‌ ಮತ್ತು ಎರಡು ಚಾಣಾಕ್ಷ ಸರ್ವ್‌ಗಳ ನೆರವಿನಿಂದ ಭಾರತದ ಜೋಡಿ 15–15 ರಿಂದ ಸಮಬಲ ಸಾಧಿಸಿತು. ಕೊನೆಯಲ್ಲಿ ಒತ್ತಡಕ್ಕೆ ಒಳಗಾದ ಭಾರತದ ಆಟಗಾರರು ಸ್ವಯಂಕೃತ ತಪ್ಪುಗಳನ್ನು ಮಾಡಿದರು. ಇದರ ಲಾಭ ಪಡೆದುಕೊಂಡು ಸ್ಥಳೀಯ ಜೋಡಿ ಗೆಲುವು ಒಲಿಸಿಕೊಂಡಿತು. ಸಿಂಗಲ್ಸ್‌ ವಿಭಾಗದಲ್ಲಿ ಕಣದಲ್ಲಿರುವ ಎಚ್‌.ಎಸ್.ಪ್ರಣಯ್‌ ಅವರು ಭಾರತದ ಏಕೈಕ ಭರವಸೆ ಎನಿಸಿದ್ದಾರೆ. ಅವರು ಕ್ವಾರ್ಟರ್‌ಫೈನಲ್‌ನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸೆನ್‌ ವಿರುದ್ಧ ಪೈಪೋಟಿ ನಡೆಸುವರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.