ಅಮೆರಿಕ ಓಪನ್‌: ಸಮಾನ ಬಹುಮಾನ ಮೊತ್ತ ನಿರ್ಧಾರಕ್ಕೆ ಸುವರ್ಣ ಸಂಭ್ರಮ ನ್ಯೂಯಾರ್ಕ್‌: ಸುಮಾರು 51 ವರ್ಷಗಳ ಹಿಂದೆ, 1972 ರಲ್ಲಿ ಬಿಲ್ಲಿ ಜೀನ್‌ ಕಿಂಗ್‌ ಅಮೆರಿಕ ಓಪನ್‌ ಪ್ರಶಸ್ತಿ ಗೆದ್ದಾಗ ಅವರ ಪ್ರತಿಕ್ರಿಯೆ ಮಾಮೂಲಿನಂತೆ ಇರಲಿಲ್ಲ. ಮತ್ತೊಮ್ಮೆ ಗೆಲ್ಲುವ ವಿಶ್ವಾಸದೊಡನೆ ಬರುವೆ ಎನ್ನುವ ಬದಲು ಮುಂದಿನ ವರ್ಷ ಆಡುವುದಿಲ್ಲ, ಬೇರೆ ಮಹಿಳೆಯರೂ ಸಹ– ಎಂದು ಬೆದರಿಕೆಯ ಧಾಟಿಯಲ್ಲಿ ಹೇಳಿದರು. ಅವರ ಧ್ವನಿಯೆತ್ತಲು ಕಾರಣ ಅವರಿಗೆ ಆಗ ಪ್ರಶಸ್ತಿ ಗೆಲುವಿಗೆ $10,000 ನೀಡಿದ್ದು. ಇದು ಪುರುಷರ ವಿಭಾಗದಲ್ಲಿ ಗೆದ್ದ ಈಲಿ ನಸ್ತಾಸೆ ಅವರಿಗಿಂತ $15,000 ಕಡಿಮೆ. ‘ಈ ತಾರತಮ್ಯ ತುಂಬಾ ಅಸಹ್ಯ ಎಂದು ಆಗಲೇ ಹೇಳಿದ್ದೆ’ ಎಂದು ಬಿಲ್ಲಿ ಜೀನ್ ಕಿಂಗ್‌ ಗುರುವಾರ ನೆನಪಿಸಿಕೊಂಡರು. ಅವರ ಈ ತೀಕ್ಷ್ಣ ಮಾತುಗಳ ಪರಿಣಾಮ, ಅಮೆರಿಕ ಟೆನಿಸ್‌ ಸಂಸ್ಥೆ (ಯುಎಸ್‌ಟಿಎ) 1973ರಲ್ಲಿಯೇ ಪುರುಷರ ಮತ್ತು ಮಹಿಳಾ ವಿಭಾಗದ ವಿಜೇತರಿಗೆ ಸಮಾನ ಬಹುಮಾನದ ಹಣ ನೀಡುವ ಪರಿಪಾಟ ಆರಂಭಿಸಿತು. ಎರಡೂ ವಿಭಾಗಗಳಲ್ಲಿ ಸಮಾನ ಬಹುಮಾನ ಮೊತ್ತ ನೀಡಿದ ಮೊದಲ ಪ್ರಮುಖ ಕ್ರೀಡಾ ಟೂರ್ನಿ ಇದು. ಈ ಐತಿಹಾಸಿಕ ಘಳಿಗೆಯ 50ನೇ ವರ್ಷದ ಸಂಭ್ರಮವನ್ನು ಈ ಬಾರಿ ಬಿಲ್ಲಿ ಜೀನ್ ಕಿಂಗ್‌ ಹೆಸರಿನಲ್ಲೇ ಇರುವ ಅರೇನಾದಲ್ಲಿ ಆಚರಿಸಲಾಗುವುದು. ‘ಈಗ ಇದು ಸಾಮಾನ್ಯ ಆಗಿರಬಹುದು. ಆದರೆ 1973ರಷ್ಟು ಹಿಂದೆಯೇ ಅಮೆರಿಕ ಟೆನಿಸ್‌ ಸಂಸ್ಥೆ, ಇಂಥ ನಿರ್ಧಾರದ ವಿಷಯದಲ್ಲಿ ಇತರ ಕ್ರೀಡಾ ಸಂಸ್ಥೆಗಳಿಗಿಂತ ಮುಂದೆ ಹೋಗಿತ್ತು’ ಎಂದು ಸ್ಟೇಸಿ ಅಲ್ಲಾಸ್ಟರ್ ಹೇಳಿದರು. ಅವರು 2020ರಲ್ಲಿ ಅಮೆರಿಕ ಓಪನ್‌ ಟೂರ್ನಿಯ ನಿರ್ದೇಶಕರಾದ ಮೊದಲ ಮಹಿಳೆ. ಮಹಿಳಾ ಟೆನಿಸಿಗರು ತಾವು ಊಹಿಸಿರುವುದಕ್ಕಿಂತ ಹೆಚ್ಚು ಜನಪ್ರಿಯತೆ ಹೊಂದಿದ್ದಾರೆ ಎಂದು ಯುಎಸ್‌ ಓಪನ್‌ನಲ್ಲಿ ನಡೆದ ಸಮೀಕ್ಷೆಯೊಂದರ ಬಗ್ಗೆ ಕಿಂಗ್‌ ಅರಿತುಕೊಂಡಿದ್ದರು. ಆದರೆ ಪುರುಷ, ಮಹಿಳಾ ವಿಭಾಗದ ವಿಜೇತರಿಗೆ ಸಮಾನ ಮೊತ್ತ ಚೆಕ್ ನೀಡುವವರೆಗೆ, ಅದರಿಂದೇನೂ ಪ್ರಯೋಜನವಾಗುವುದಿಲ್ಲ ಎಂದು ಅವರು ಭಾವಿಸಿದ್ದರು. ಈ $15,000 ವ್ಯತ್ಯಾಸ ಸರಿದೂಗಿಸಲು ಅವರ ಪ್ರಾಯೋಜಕರನ್ನು ಕಂಡುಕೊಳ್ಳಲು ತಾವೇ ಮುಂದಾದರು. ‘ನಾವು ಹಣ ತಂದುಕೊಟ್ಟರೆ, ಅದನ್ನು ಬಹುಮಾನವಾಗಿ ಕೊಡುವುದಿಲ್ಲ ಎಂದು ಅವರು ಹೇಗೆ ಹೇಳುತ್ತಾರೆ?’ ಎಂದು ಮನಸ್ಸಿನಲ್ಲೇ ಪ್ರಶ್ನಿಸಿಕೊಂಡಿದ್ದರು. ಹೀಗಾಗಿ ಆ ವರ್ಷದ (1973) ಬೇಸಿಗೆಯಲ್ಲೇ ಎರಡೂ ವಿಭಾಗಗಳ ಚಾಂಪಿಯನ್ನರಿಗೆ $25,000 ಬಹುಮಾನ ನೀಡುವ ನಿರ್ಧಾರ ಪ್ರಕಟಿಸಲಾಯಿತು. ಈಗ ಈ ಬಹುಮಾನದ ಮೊತ್ತ ತಲಾ $3 ದಶಲಕ್ಷ ಆಗಿದೆ. ಮುಂದೆ ಇತರ ಗ್ರ್ಯಾಂಡ್‌ಸ್ಲಾಮ್‌ ಟೂರ್ನಿಗಳಲ್ಲೂ ಸಮಾನ ಮೊತ್ತ ನೀಡುವ ವ್ಯವಸ್ಥೆ ಶುರುವಾಯಿತು. ಇತರ ಕೆಲವು ಪ್ರತಿಷ್ಠಿತ ಟೂರ್ನಿಗಳಲ್ಲೂ ಸಮಾನ ಬಹುಮಾನ ಮೊತ್ತ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಈ ಮಹಿಳಾ ಟೆನಿಸ್‌ ಸಂಸ್ಥೆ (ಡಬ್ಲ್ಯುಟಿಎ) ಈ ವರ್ಷದ ಆರಂಭದಲ್ಲಿ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.