ಚೆಸ್‌: ಭಾರತದ ಶಕ್ತಿ ಹೆಚ್ಚಿಸಿದ ಪ್ರಜ್ಞಾನಂದ, ಗುಕೇಶ್ ಸಾಧನೆ ಚೆನ್ನೈ : ಭಾರತದ ಮೊದಲ ಗ್ರ್ಯಾಂಡ್‌ಮಾಸ್ಟರ್‌ ವಿಶ್ವನಾಥನ್ ಆನಂದ್ ಅವರು ಹಲವು ಟೂರ್ನಿಗಳಲ್ಲಿ ಯಶಸ್ಸು ಗಳಿಸಿ ದೀರ್ಘಕಾಲ ದೇಶದ ಚೆಸ್‌ ಲೋಕವನ್ನು ಆಳಿದವರು. ಆದರೆ ಕಳೆದ ಒಂದು ದಶಕದಿಂದ ಪರಿಸ್ಥಿತಿ ನಿಧಾನವಾಗಿ ಬದಲಾಗುತ್ತಿದೆ. ಹದಿಹರೆಯದ ಪ್ರತಿಭಾನ್ವಿತ ಆಟಗಾರರು ಪ್ರವರ್ಧಮಾನಕ್ಕೆ ಬಂದು ಭಾರತವನ್ನು ಈಗ ಚೆಸ್‌ ಆಟದಲ್ಲಿ ವಿಶ್ವದಲ್ಲೇ ಪ್ರಬಲ ತಂಡವನ್ನಾಗಿ ರೂಪಿಸುತ್ತಿದ್ದಾರೆ. ಭರವಸೆ ಮೂಡಿಸಿರುವ ಈಗಿನ ಯುವ ಆಟಗಾರರು ಭಾರತದ ಚೆಸ್‌ ಸುವರ್ಣ ಪೀಳಿಗೆಯವರು ಎಂದು ಸ್ವತಃ ವಿಶ್ವನಾಥನ್ ಆನಂದ್‌ ಬಣ್ಣಿಸಿದ್ದಾರೆ. ಆರ್.ಪ್ರಜ್ಞಾನಂದ, ಅರ್ಜುನ್‌ ಎರಿಗೇಶಿ, ಡಿ.ಗುಕೇಶ್ ಜೊತೆಗೆ ಅನುಭವಿ ವಿದಿತ್‌ ಎಸ್‌.ಗುಜರಾತಿ ಅವರು ಬಾಕುವಿನಲ್ಲಿ ನಡೆದ ವಿಶ್ವಕಪ್‌ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ ತಲುಪಿದ್ದು ಭಾರತ ಚೆಸ್‌ ಆಟದಲ್ಲಿ ಸಾಧಿಸಿರುವ ಗಮನಾರ್ಹ ಪ್ರಗತಿಗೆ ಕನ್ನಡಿಯಾಗಿತ್ತು. ಹಿಂದಿನ ಸೋವಿಯತ್‌ ಯೂನಿಯನ್, ಅದು ವಿಭಜನೆಗೊಂಡ ನಂತರ ರಷ್ಯಾದ ಆಟಗಾರು ಹಲವು ದಶಕಗಳ ಕಾಲ ವಿಶ್ವ ಚೆಸ್‌ ಸಾಮ್ರಾಜ್ಯವನ್ನು ಆಳಿದ್ದರು. ಪ್ರಜ್ಞಾನಂದ ಅವರು ಫೈನಲ್ ತಲುಪುವ ಮೂಲಕ ಭವಿಷ್ಯದ ಚಾಂಪಿಯನ್‌ ಆಟಗಾರನಾಗುವಂತೆ ಕಂಡಿದ್ದಾರೆ. ವಿಶ್ವಕಪ್‌ ಟೂರ್ನಿಯಲ್ಲಿ ಹಿಕಾರು ನಕಾಮುರಾ, ಫ್ಯಾಬಿಯಾನೊ ಕರುವಾನ ಮೊದಲಾದ ಘಟಾನುಘಟಿಗಳನ್ನು ಸೋಲಿಸಿದ್ದಾರೆ. ಹದಿಹರೆಯದ ಮೂವರು– ಪ್ರಜ್ಞಾನಂದ (18), ಗುಕೇಶ್‌ (17) ಮತ್ತು ಎರಿಗೇಶಿ (19) ಅವರಂತೂ ವಿಶ್ವ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಪ್ರಜ್ಞಾನಂದ ಈಗಾಗಲೇ ಸಾಧನೆಗಳ ಮೂಲಕ ಹೆಸರು ಮಾಡಿದರೆ, ಗುಕೇಶ್‌ ಕಳೆದ ಒಂದು ವರ್ಷದ ಅವಧಿಯಲ್ಲಿ ಸಾಧಿಸಿದ ಪ್ರಗತಿ ಆಗಾಧ. ಇತ್ತೀಚಿನ ದಿನಗಳಲ್ಲಿ ಅರ್ಜುನ್ ಎರಿಗೇಶಿ ಕೂಡ ದೊಡ್ಡ ಹೆಜ್ಜೆಗಳನ್ನಿಡುತ್ತಿದ್ದಾರೆ. ಕಳೆದ ವರ್ಷ ಚೆನ್ನೈನಲ್ಲಿ ನಡೆದ ಒಲಿಂಪಿಯಾಡ್‌ನಲ್ಲಿ ಗುಕೇಶ್‌ ಮೊದಲ ಬೋರ್ಡ್‌ನಲ್ಲಿ ಚಿನ್ನದ ಪದಕ ಗಳಿಸಿದ್ದರು. ನಂತರ ಅವರ ರ್‍ಯಾಂಕಿಂಗ್ ಏರುತ್ತಲೇ ಇದೆ. ಇತ್ತೀಚೆಗಷ್ಟೇ ಅವರು ವಿಶ್ವನಾಥನ್ ಆನಂದ್ ಅವರನ್ನು ಕ್ರಮಾಂಕದಲ್ಲಿ ಹಿಂದೆ ಹಾಕಿ ಭಾರತದ ಅಗ್ರಮಾನ್ಯ ಆಟಗಾರ ಎನಿಸಿದ್ದಾರೆ. ಮುಂದಿನ ವರ್ಷ ಕೆನಡಾದಲ್ಲಿ ನಡೆಯಲಿರುವ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಆಡುವ ಅರ್ಹತೆ ಗಳಿಸಿದ್ದಾರೆ. ಆ ಮೂಲಕ ಪ್ರಜ್ಞಾನಂದ ವಿಶ್ವಚಾಂಪಿಯನ್‌ ಡಿಂಗ್‌ ಲಿರೆನ್‌ಗೆ ಸವಾಲು ಎಸೆಯುವ ಆಟಗಾರನ ಸ್ಥಾನಕ್ಕೆ ಪೈಪೋಟಿ ನಡೆಸುವ ಹಾದಿಯಲ್ಲೂ ಸಾಗಿದ್ದಾರೆ. ‘ಪ್ರಜ್ಞಾನಂದ, ಗುಕೇಶ್‌, ಎರಿಗೇಶಿ ಮತ್ತು ನಿಹಾಲ್ ಸರಿನ್ ಅವರು ಉಜ್ವಲ ಭವಿಷ್ಯದ ಆಟಗಾರರು’ ಎನ್ನುತ್ತಾರೆ ಗ್ರ್ಯಾಂಡ್‌ಮಾಸ್ಟರ್‌ ಸುಂದರರಾಜನ್ ಕಿಡಂಬಿ. ‘ನಮ್ಮ ದೇಶದ ಚೆಸ್‌ ಭವಿಷ್ಯ ಈ ಕಿರಿಯ ಆಟಗಾರರ ಕೈಯ್ಯಲ್ಲಿ ಸುರಕ್ಷಿತವಾಗಿದೆ. ಇವರಲ್ಲೊಬ್ಬರು ಮುಂದೊಂದು ದಿನ ಖಂಡಿತ ವಿಶ್ವ ಚಾಂಪಿಯನ್‌ ಆಗುವ ತಾಕತ್ತು ಹೊಂದಿರುವವರೇ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.