ಅಮಿತ್‌ ರಾಜ್‌ಗೆ ‘ಡಬಲ್’ ಸಂಭ್ರಮ ಮಂಗಳೂರು: ಗ್ಲಾಡ್ಸನ್ ಅಕಾಡೆಮಿಯ ಅಮಿತ್ ರಾಜ್ ಎನ್‌, ಇಲ್ಲಿನ ಮಂಗಳಾ ಬ್ಯಾಡ್ಮಿಂಟನ್‌ ಸಂಸ್ಥೆ ಆಯೋಜಿಸಿದ್ದ ‘ಮಂಗಳಾ ಕಪ್‌ ಜೂನಿಯರ್‌’ ವಿವಿಧ ವಯೋಮಾನದವರ ಮುಕ್ತ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ‘ಡಬಲ್‌’ ಪ್ರಶಸ್ತಿಯ ಸಂಭ್ರಮ ಉಂಡರು. ನಗರದ ಯು.ಎಸ್‌. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ 15 ವರ್ಷದೊಳಗಿನ ಬಾಲಕರ ಸಿಂಗಲ್ಸ್ ಮತ್ತು ಡಬಲ್ಸ್ ಫೈನಲ್‌ನಲ್ಲಿ ಅವರು ಜಯಭೇರಿ ಮೊಳಗಿಸಿದರು. ಸಿಂಗಲ್ಸ್‌ನಲ್ಲಿ ಮಂಗಳೂರಿನ ಎಸ್‌ಬಿಎಯ ನಿಕೇತನ್ ವಿರುದ್ಧ 15–10, 16–14ರಲ್ಲಿ ಜಯ ಗಳಿಸಿದ ಅವರು ಡಬಲ್ಸ್‌ನಲ್ಲಿ ಮಂಗಳೂರಿನ ಕನಿಷ್ಕ್‌ ಕಿರಣ್ ಬೇಂಗ್ರೆ ಜೊತೆಗೂಡಿ ನಿಕೇತನ್ ಮತ್ತು ಬೆಂಗಳೂರು ಓವಲ್‌ನೆಟ್‌ ಅರೇನಾದ ತ್ರಿಶನ್ ಕುಮಾರ್ ಜೋಡಿಯನ್ನು 15–8, 10–15, 15–13ರಲ್ಲಿ ಗೆಲುವು ಮಣಿಸಿದರು. ನಗರದ ಎಸ್‌ಬಿಎ ಆಟಗಾರರಾದ ಸಹರ್ಷ್‌ ಪ್ರಭು ಮತ್ತು ಸಮಕ್ಷ್‌ ಕ್ರಮವಾಗಿ 19 ಮತ್ತು 9 ವರ್ಷದೊಳಗಿನ ಬಾಲಕರ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು. 19 ವರ್ಷದೊಳಗಿನವರ ವಿಭಾಗದಲ್ಲಿ ಸಹರ್ಷ್‌ 15–9, 15–13ರಲ್ಲಿ ಗೋಲ್ಡನ್‌ ಷಟಲ್‌ನ ಆರವ್ ಮೈಂದನ್ ವಿರುದ್ಧ ಜಯ ಸಾಧಿಸಿದರು. 9 ವರ್ಷದೊಳಗಿನವರ ಪ್ರಶಸ್ತಿ ಸುತ್ತಿನ ಮುಖಾಮುಖಿಯಲ್ಲಿ ಸಮಕ್ಷ್‌ 15–10, 15–12ರಲ್ಲಿ ಅನುರಾಗ್ ನಾಯಕ್‌ ಎದುರು ಗೆದ್ದರು. 13 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ನಲ್ಲಿ ಎಸ್‌ಬಿಎ ಪ್ರತಿನಿಧಿಸಿದ ಸಾತ್ವಿಕ್ ಪ್ರಭು 30–3ರಲ್ಲಿ ಬೆಂಗಳೂರಿನ ಆ್ಯಸ್ಪೈರ್‌ ಬ್ಯಾಡ್ಮಿಂಟನ್ ಅಕಾಡೆಮಿಯ ಇವಾನ್ ಫರ್ನಾಂಡಿಸ್ ವಿರುದ್ಧ ಗೆದ್ದರು. ಡಬಲ್ಸ್‌ನಲ್ಲಿ ಕೇರಳದ ಕಣ್ಣೂರಿನ ಮಹಮ್ಮದ್ ಅಯಾನ್ ಮತ್ತು ರಿಹಾನ್ ಅಲಿ 15–10, 8–15, 15–13ರಲ್ಲಿ ಉಡುಪಿಯ ಎಲ್ಡನ್ ಪಿಂಟೊ ಮತ್ತು ಉದತ್ ಶೆಟ್ಟಿ ವಿರುದ್ಧ ಜಯ ಗಳಿಸಿದರು. 11 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ ಫೈನಲ್‌ನಲ್ಲಿ ಎಸ್‌ಬಿಎಯ ಆದಿತ್‌, ಗ್ಲಾಡ್ಸನ್‌ನ ನಿವಿನ್ ಶಾರೋನ್‌ ವಿರುದ್ಧ 15–10, 15–3ರಲ್ಲಿ ಜಯ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.