ಸಾರ್ವಕಾಲಿಕ ಶ್ರೇಷ್ಠ ಅಥ್ಲೀಟ್‌ ಎನ್ನಬೇಡಿ...: ನೀರಜ್‌ ಚೋಪ್ರಾ ಮನವಿ ಬುಡಾಪೆಸ್ಟ್‌: ಜಾವೆಲಿನ್‌ನಲ್ಲಿ ವಿಶ್ವ ಚಾಂಪಿಯನ್‌ಷಿಪ್‌ ಗೆದ್ದ ನಂತರ ನೀರಜ್‌ ಚೋಪ್ರಾ ಅವರು ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ರೀಡಾಪಟು ಎನಿಸಿದ್ದಾರೆ. ಆದರೆ ಇದನ್ನು ಚೋಪ್ರಾ ಒಪ್ಪಿಕೊಳ್ಳಲು ತಯಾರಿಲ್ಲ. ಚೋಪ್ರಾ ಭಾನುವಾರ ರಾತ್ರಿ ಬುಡಾಪೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ 88.17 ಮೀ. ದೂರಕ್ಕೆ ಜಾವೆಲಿನ್ ಎಸೆದಿದ್ದರು. ಅಥ್ಲೆಟಿಕ್ಸ್‌ನಲ್ಲಿ ಒಲಿಂಪಿಕ್ಸ್‌ ಚಿನ್ನ ಗೆದ್ದ ಮೊದಲ ಅಥ್ಲೀಟ್‌ ಕೂಡ ಅವರು. ಅವರು ವಿಶ್ವದ ಪ್ರಮುಖ ಪ್ರಶಸ್ತಿಗಳನ್ನೆಲ್ಲಾ ಜಯಿಸಿದ್ದು ನಿಸ್ಸಂದೇಹವಾಗಿ ಭಾರತದ ಶ್ರೇಷ್ಠ ಅಥ್ಲೀಟ್‌ ಎನಿಸಿದ್ದಾರೆ. ಆದರೆ ವಿನಮ್ರತೆಗೆ ಹೆಸರಾಗಿರುವ ಅವರು ಭಾರತದ ಸಾರ್ವಕಾಲಿಕ ಶ್ರೇಷ್ಠ ಅಥ್ಲೀಟ್‌ ಎಂಬ ಚರ್ಚೆಯಲ್ಲಿ ಒಳಗೊಳ್ಳಲು ಇಷ್ಟಪಟ್ಟಿಲ್ಲ. ‘ನಾನು ಸಾರ್ವಕಾಲಿಕ ಶ್ರೇಷ್ಠ ಅಥ್ಲೀಟ್ ಎಂಬ ಮಾತನ್ನು ಒಪ್ಪಲಾರೆ. ನನಗೆ ಕೇವಲ ವಿಶ್ವ ಚಾಂಪಿಯನ್‌ ಚಿನ್ನ ಅಷ್ಟೇ ಗೆಲ್ಲಲು ಬಾಕಿ ಉಳಿದಿದೆ ಎಂದು ಜನರು ಹೇಳುತ್ತಿದ್ದರು. ಅದನ್ನು ನಾನು ಗೆದ್ದಾಯಿತು. ಆದರೆ ಸಾಧಿಸಲು ನನ್ನ ಎದುರು ಹಲವು ಗುರಿಗಳಿವೆ. ಅದರ ಕಡೆ ನನ್ನ ಲಕ್ಷ್ಯವಿರಲಿದೆ. ನಾನು ಇದನ್ನು (ಸಾವಕಾಲಿಕ ಶ್ರೇಷ್ಠ) ಹೇಳಿಕೊಳ್ಳಲು ಬಯಸುವುದಿಲ್ಲ’ ಎಂದು ಚೋಪ್ರಾ ಪ್ರತಿಕ್ರಿಯಿಸಿದರು.‌ ‘ಹಾಗೇ ಶ್ರೇಷ್ಠ ಅಥ್ಲೀಟ್ ಎನಿಸಿಕೊಳ್ಳಬೇಕಾದರೆ, ಅದು ಜಾನ್‌ ಜೆಲೆಸ್ಕಿ ರೀತಿ ಇರಬೇಕು’ ಎಂದು ಚೋಪ್ರಾ ಅವರು, ಜೆಕೊಸ್ಲಾವಾಕಿಯಾದ ವಿಶ್ವದಾಖಲೆವೀರನ ಹೆಸರು ಪ್ರಸ್ತಾಪಿಸಿದರು. ಜೆಲೆನ್‌ಸ್ಕಿ, ಜಾವೆಲಿನ್‌ನಲ್ಲಿ ದಂತಕತೆಯಾಗಿದ್ದು, ಹಲವು ವರ್ಷಗಳಿಂದ ವಿಶ್ವದಾಖಲೆ (98.48 ಮೀ.)ಯನ್ನು ತಮ್ಮ ಹೆಸರಿನಲ್ಲೇ ಹೊಂದಿದ್ದಾರೆ. ಮೂರು ಬಾರಿ ಒಲಿಂಪಿಕ್‌ ಮತ್ತು ಮೂರು ಬಾರಿ ವಿಶ್ವ ಚಾಂಪಿಯನ್‌ ಕೂಡ. ಚೋಪ್ರಾ ಅವರಿಗೆ ಜೆಲೆನ್‌ಸ್ಕಿ ಮಾದರಿಯಾಗಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ ಕಠಿಣ ಒಲಿಂಪಿಕ್ಸ್‌ಗಿಂತ ವಿಶ್ವ ಚಾಂಪಿಯನ್‌ಷಿಪ್‌ ಹೆಚ್ಚು ಕಠಿಣ ಎನ್ನುತ್ತಾರೆ 25 ವರ್ಷದ ಚೋಪ್ರಾ. ‘ಒಲಿಂಪಿಕ್ಸ್‌ ವಿಶೇಷವಾದ ಕ್ರೀಡಾಕೂಟ. ವಿಶ್ವ ಚಾಂಪಿಯನ್‌ಷಿಪ್‌ ದೊಡ್ಡ ಮಟ್ಟದ್ದು. ಸ್ಪರ್ಧೆಯ ಮಟ್ಟ ಗಣನೆಗೆ ತೆಗೆದುಕೊಂಡರೆ, ಒಲಿಂಪಿಕ್ಸ್‌ಗಿಂತ ವಿಶ್ವ ಚಾಂಪಿಯನ್‌ಷಿಪ್‌ನಲ್ಲೇ ಹೆಚ್ಚು ಪೈಪೋಟಿ ಇರುತ್ತದೆ. ಎಲ್ಲರೂ ಇದಕ್ಕೆ ಸಿದ್ಧರಾಗಿಯೇ ಬರುತ್ತಾರೆ’ ಎಂದು ವಿಶ್ಲೇಷಿಸುತ್ತಾರೆ. ‘ಭಾರತದಿಂದ ಸಾಕಷ್ಟು ಮಂದಿ ಇಲ್ಲಿಗೆ ಬಂದಿದ್ದರು. ಸ್ಥಳೀಯರ ಬೆಂಬಲವೂ ದೊಡ್ಡ ಪ್ರಮಾಣದಲ್ಲೇ ಇತ್ತು. ಹೀಗಾಗಿ ಈ ಗೆಲುವು ವಿಶೇಷವಾದುದು’ ಎಂದರು. ಭಾರತದ ಜಾವೆಲಿನ್‌ ಪಟುಗಳಾದ ಕಿಶೋರ್‌ ಜೇನಾ ಮತ್ತು ಡಿ.ಪಿ.ಮನು ಅವರನ್ನೂ ಚೋಪ್ರಾ ಶ್ಲಾಘಿಸಿದರು. ಈ ಇಬ್ಬರೂ ಮೊದಲ ಎಂಟರೊಳಗೆ ಸ್ಥಾನ ಪಡೆದಿದ್ದರು. ‘ಕಿಶೋರ್‌ ಜೇನಾ ಮತ್ತು ಮನು ಅತ್ಯುತ್ತಮ (ಕ್ರಮವಾಗಿ ಐದು ಮತ್ತು ಆರನೇ ಸ್ಥಾನ) ಪ್ರದರ್ಶನ ನೀಡಿದರು. ದೇಶದಲ್ಲಿ ಅಥ್ಲೆಟಿಕ್ಸ್‌ ಬೆಳವಣಿಗೆ ಕಾಣುತ್ತಿದೆ. ಇದರ ಜೊತೆಗೆ ನಾವೂ ಹೆಚ್ಚು ಶ್ರಮ ಹಾಕಬೇಕು. ಇಲ್ಲಿನ (ಬುಡಾಪೆಸ್ಟ್‌) ಮಾಂಡೊ ಟ್ರ್ಯಾಕ್‌ ರೀತಿಯಲ್ಲಿ ನಮ್ಮಲ್ಲೂ ಟ್ರ್ಯಾಕ್‌ ಇರಬೇಕು. ಈ ಬಗ್ಗೆ ಅದಿಲ್‌ ಸುಮರಿಮಾಲಾ (ಎಎಫ್‌ಐ ಅಧ್ಯಕ್ಷ) ಜೊತೆ ಮಾತನಾಡಿದ್ದೇನೆ. ಆಗ ನಾವು ಇನ್ನೂ ಉತ್ತಮ ನಿರ್ವಹಣೆ ನೀಡಬಹುದು’ ಎಂದು ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.