ಮಹಿಳಾ ಹಾಕಿ ಫೈವ್ಸ್ ವಿಶ್ವಕಪ್‌ಗೆ ಭಾರತ ತಂಡ ಅರ್ಹತೆ ಸಲಾಲ, ಒಮಾನ್: ನಾಯಕಿ ನವಜೋತ್‌ ಕೌರ್‌ ಅವರ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ಭಾರತ ಮಹಿಳಾ ತಂಡದವರು ಏಷ್ಯನ್‌ ಹಾಕಿ ಫೈವ್ಸ್ ವಿಶ್ವಕಪ್‌ ಅರ್ಹತಾ ಟೂರ್ನಿಯಲ್ಲಿ ಮಲೇಷ್ಯಾ ತಂಡವನ್ನು 9–5 ರಿಂದ ಮಣಿಸಿ ಫೈನಲ್‌ ಪ್ರವೇಶಿಸಿತು. ಈ ಮೂಲಕ 2024ರ ಹಾಕಿ ಫೈವ್ಸ್‌ ವಿಶ್ವಕಪ್‌ಗೆ ಅರ್ಹತೆ ಗಳಿಸಿತು. ಸೋಮವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ನವಜೋತ್‌ ಅವರು 7, 10 ಮತ್ತು 17ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ಮರಿಯಾನಾ ಕುಜೂರ್ (9 ಮತ್ತು 12) ಹಾಗೂ ಜ್ಯೋತಿ (21 ಮತ್ತು 26) ತಲಾ ಎರಡು ಗೋಲು ತಂದಿತ್ತರು. ಇತರ ಗೋಲುಗಳನ್ನು ಮೋನಿಕಾ ದೀಪಿ ಟೊಪ್ಪೊ (22) ಹಾಗೂ ಮಹಿಮಾ ಚೌಧರಿ (14) ಗಳಿಸಿದರು. ಮಲೇಷ್ಯಾ ತಂಡದ ಪರ ಝತಿ ಮೊಹಮ್ಮದ್ (4 ಮತ್ತು 5), ದಿಯಾನ್ ನಝೀರಿ (10 ಮತ್ತು 20) ಹಾಗೂ ಅಜೀಜ್ ಝಫೀರಾ (16) ಅವರು ಚೆಂಡನ್ನು ಗುರಿ ಸೇರಿಸಿದರು. ಭಾರತ ತಂಡವು ಫೈನಲ್‌ನಲ್ಲಿ ಥಾಯ್ಲೆಂಡ್‌ ಅಥವಾ ಇಂಡೊನೇಷ್ಯಾ ತಂಡವನ್ನು ಎದುರಿಸಲಿದೆ. ಚೊಚ್ಚಲ ಹಾಕಿ ಫೈವ್ಸ್‌ ವಿಶ್ವಕಪ್‌ ಟೂರ್ನಿ ಮುಂದಿನ ವರ್ಷ ಜ. 24 ರಿಂದ 27ರ ವರೆಗೆ ಮಸ್ಕತ್‌ನಲ್ಲಿ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.