ಹಾಕಿ ಫೈವ್ಸ್: ಭಾರತಕ್ಕೆ ಮೂರನೇ ಗೆಲುವು ಸಲಾಲ, ಒಮಾನ್ (ಪಿಟಿಐ): ಭಾರತ ಮಹಿಳಾ ಹಾಕಿ ತಂಡದವರು ಏಷ್ಯನ್‌ ಹಾಕಿ ಫೈವ್ಸ್ ವಿಶ್ವಕಪ್‌ ಅರ್ಹತಾ ಟೂರ್ನಿಯಲ್ಲಿ ಸತತ ಮೂರನೇ ಗೆಲುವು ಸಾಧಿಸಿದರು. ಭಾನುವಾರ ನಡೆದ ಪಂದ್ಯದಲ್ಲಿ ಭಾರತ 5–4 ಗೋಲುಗಳಿಂದ ಥಾಯ್ಲೆಂಡ್‌ ತಂಡವನ್ನು ಮಣಿಸಿತು. ನಾಯಕಿ ನವಜೋತ್‌ ಕೌರ್ (1ನೇ ನಿ.), ಮೋನಿಕಾ ದೀಪಿ ಟೊಪ್ಪೊ (1 ಮತ್ತು 7ನೇ ನಿ.), ಮಹಿಮಾ ಚೌಧರಿ (20) ಮತ್ತು ಅಜ್‌ಮಿನಾ ಕುಜೂರ್ (30) ಅವರು ಗೋಲು ಗಳಿಸಿ ಗೆಲುವಿಗೆ ಕಾರಣರಾದರು. ಥಾಯ್ಲೆಂಡ್‌ ತಂಡದ ಪರ ಪಿರೆರ್ಸಮ್ ಅನೊಂಗ್‌ನತ್ (3ನೇ ನಿ.), ಅಂಜಯ್ ನಥಕರ್ನ್ (10 ಮತ್ತು 14ನೇ ನಿ.) ಮತ್ತು ಸುವಪತ್ ಕೊಂತೊಂಗ್ (19ನೇ ನಿ.) ಅವರು ಗೋಲು ಗಳಿಸಿದರು. ಶುಕ್ರವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ ತಂಡ 7–2 ರಿಂದ ಮಲೇಷ್ಯಾ ತಂಡವನ್ನು ಮಣಿಸಿದ್ದರೆ, ಶನಿವಾರ ರಾತ್ರಿ ನಡೆದಿದ್ದ ಎರಡನೇ ಪಂದ್ಯದಲ್ಲಿ 7–1 ರಿಂದ ಜಪಾನ್‌ ಎದುರು ಗೆದ್ದಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.