ಬ್ಯಾಸ್ಕೆಟ್‌ಬಾಲ್ ಟೂರ್ನಿ: ಸೇಂಟ್ ಜೋಸೆಫ್ಸ್‌, ನಿಟ್ಟೆ ಕ್ಯಾಂಪಸ್ ಚಾಂಪಿಯನ್ ಮಂಗಳೂರು: ಬೆಂಗಳೂರಿನ ಸೇಂಟ್‌ ಕ್ಲಾರೆಟ್ ತಂಡವನ್ನು ಮಣಿಸಿದ ಬೆಂಗಳೂರಿನ ಸೇಂಟ್ ಜೋಸೆಫ್ಸ್‌ ತಂಡ ದಕ್ಷಿಣ ಕನ್ನಡ ಜಿಲ್ಲಾ ಬ್ಯಾಸ್ಕೆಟ್‌ಬಾಲ್ ಸಂಸ್ಥೆಯ ಸಹಯೋಗದಲ್ಲಿ ಮಂಗಳೂರು ಬ್ಯಾಸ್ಕೆಟ್‌ಬಾಲ್ ಕ್ಲಬ್‌ ಆಯೋಜಿಸಿದ್ದ ಜೇಮ್ಸ್ ನೈಸ್ಮಿತ್‌ ಕಪ್‌ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಅಂತರ ಕಾಲೇಜು ಪುರುಷರ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಕಾರ್ಕಳದ ನಿಟ್ಟೆ ಕ್ಯಾಂಪಸ್ ತಂಡ ನಿಟ್ಟೆ ವಿಶ್ವವಿದ್ಯಾಲಯ ತಂಡವನ್ನು ಮಣಿಸಿ ಮಹಿಳಾ ವಿಭಾಗದ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು. ನಗರದ ಯು.ಎಸ್‌. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಫೈನಲ್‌ನಲ್ಲಿ ಸೇಂಟ್ ಜೋಸೆಫ್ಸ್‌ 53–34ರಲ್ಲಿ ಜಯ ಗಳಿಸಿತು. ಮಹಿಳಾ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ನಿಟ್ಟೆ ಕ್ಯಾಂಪಸ್ 37-30ರಲ್ಲಿ ಜಯ ಗಳಿಸಿತು. ಹೈಸ್ಕೂಲ್ ಬಾಲಕರ ವಿಭಾಗದ ಫೈನಲ್‌ನಲ್ಲಿ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್‌ 24–17ರಲ್ಲಿ ಕೇಂಬ್ರಿಡ್ಜ್‌ ಶಾಲೆ ವಿರುದ್ಧ ಗೆಲುವು ಸಾಧಿಸಿತು. ಬಾಲಕಿಯರ ವಿಭಾಗದ ಸೆಮಿಫೈನಲ್‌ ಲೀಗ್‌ನಲ್ಲಿ ಹೆಚ್ಚು ಪಂದ್ಯ ಗೆದ್ದ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್‌ ಪ್ರಶಸ್ತಿ ಗಳಿಸಿತು. ಬೆಂಗಳೂರಿನ ಜೆಎಸ್‌ಎಸ್‌ ಶಾಲೆ ರನ್ನರ್ ಅಪ್‌ ಆಯಿತು. ಪ್ರಾಥಮಿಕ ಶಾಲೆ ಬಾಲಕರ ವಿಭಾಗದಲ್ಲಿ ಪ್ರೆಸಿಡೆನ್ಸಿ ಸ್ಕೂಲ್‌, 4–3ರಲ್ಲಿ ಮಂಗಳೂರಿನ ಮೌಂಟ್‌ ಕಾರ್ಮೆಲ್ ವಿರುದ್ಧ ಜಯ ಗಳಿಸಿ ಪ್ರಶಸ್ತಿ ಗೆದ್ದುಕೊಂಡಿತು. ಬಾಲಕಿಯರ ವಿಭಾಗದಲ್ಲಿ ಸೇಂಟ್ ತೆರೆಸಾ ಶಾಲೆ ಮಂಗಳೂರಿನ ಸೇಂಟ್ ಲೂರ್ದ್ಸ್‌ ಶಾಲೆ ಎದುರು 7–3ರಲ್ಲಿ ಜಯ ಸಾಧಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.