ಟಿಟಿ: ಕಲೈವನನ್, ದೇಶ್ನಾಗೆ ಪ್ರಶಸ್ತಿ ಬೆಳಗಾವಿ: ಎಂ. ಕಲೈವನನ್ ಮತ್ತು ದೇಶ್ನಾ ಎಂ. ವಂಶಿಕಾ ಅವರು ಬೆಳಗಾವಿ ಟೇಬಲ್‌ ಟೆನಿಸ್‌ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ 3ನೇ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದರು. ಟೂರ್ನಿಯ ಎರಡನೇ ದಿನವಾದ ಶುಕ್ರವಾರ ಪುರುಷರ ವಿಭಾಗದ ಫೈನಲ್‌ ಪಂದ್ಯದಲ್ಲಿ ಕಲೈವನನ್ ಅವರು 12-10, 11-9, 11-6, 10-12, 11-6ರಿಂದ ಅನಿರ್ಬನ್ ರಾಯ್‌ಚೌಧರಿ ಮಣಿಸಿದರು. ಸೆಮಿಫೈನಲ್‌ನಲ್ಲಿ ಕಲೈವನನ್‌ ಅವರು ಅನುಜ್ ಮಹಿಪಾಲ್ ಅವರನ್ನು, ಅನಿರ್ಬನ್ ಅವರು ಸುರಮಿತ್ ಸಮದ್ದಾರ್ ಅವರನ್ನು ಸೋಲಿಸಿದ್ದರು. ಮಹಿಳೆಯರ ಫೈನಲ್‌ ಪಂದ್ಯದಲ್ಲಿ ದೇಶ್ನಾ ಅವರು 11-6, 11-9, 11-6, 11-7 ರಿಂದ ಖುಷಿ ಅವರನ್ನು ಪರಾಭವಗೊಳಿಸಿದರು. ಸೆಮಿಫೈನಲ್‌ನಲ್ಲಿ ದೇಶ್ನಾ ಅವರು ತೃಪ್ತಿ ಪುರೋಹಿತ್‌ ಅವರನ್ನು, ಖುಷಿ ಅವರು ಅನರ್ಘ್ಯ ಮಂಜುನಾಥ್ ಅವರನ್ನು ಮಣಿಸಿದ್ದರು. 17 ವರ್ಷದೊಳಗಿನ ಬಾಲಕರ ವಿಭಾಗದ ಫೈನಲ್‌ ಪಂದ್ಯದಲ್ಲಿ ತೆಶುಬ್ ದಿನೇಶ್ ಅವರು 5-11, 11-6, 19-17, 11-13, 11-9 ರಿಂದ ಅಭಿನವ್ ಕೆ. ಮೂರ್ತಿ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದರು. ಸೆಮಿಫೈನಲ್‌ನಲ್ಲಿ ತೆಶುಬ್ ಅವರು ಬಿ.ಆರ್‌. ಗೌರವ್ ಅವರನ್ನು, ಅಭಿನವ್‌ ಅವರು ವರುಣ್‌ ಬಿ. ಕಶ್ಯಪ್‌ ಅವರನ್ನು ಸೋಲಿಸಿದ್ದರು. 17 ವರ್ಷದೊಳಗಿನ ಬಾಲಕಿಯರ ವಿಭಾಗದ ಫೈನಲ್‌ ಪಂದ್ಯದಲ್ಲಿ ಸಾನ್ವಿ ವಿಶಾಲ್ ಮಾಂಡೇಕರ್ ಅವರು 11-7, 16-18, 11-7, 12-14, 11-4ರಿಂದ ನೀತಿ ಅಗರ್‌ವಾಲ್‌ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದರು. ಸೆಮಿಫೈನಲ್‌ನಲ್ಲಿ ನೀತಿ ಅವರು ಪ್ರೇಕ್ಷಾ ಟಿ. ತಿಲಾವತ್‌ ಅವರನ್ನು, ಸಾನ್ವಿ ಅವರು ಹಿಮಾಂಶಿ ಚೌಧರಿ ಅವರನ್ನು ಮಣಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.