ಏಷ್ಯನ್‌ ಗೇಮ್ಸ್: ಭಾರತ ಶೂಟಿಂಗ್ ತಂಡ ಆಯ್ಕೆ ನವದೆಹಲಿ (ಪಿಟಿಐ): ಚೀನಾದಲ್ಲಿ ಇದೇ ತಿಂಗಳು ನಡೆಯಲಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಕಣಕ್ಕಿಳಿಯುವ ಭಾರತದ ಶೂಟಿಂಗ್ ತಂಡದಲ್ಲಿ 35 ಆಟಗಾರರು ಸ್ಥಾನ ಪಡೆದಿದ್ದಾರೆ. ಹಾಂಗಜೌನಲ್ಲಿ ಸೆ 23 ರಿಂದ ನವೆಂಬರ್ 2ರವರೆಗೆ ಕೂಟವು ನಡೆಯಲಿದೆ. ಭಾರತ ರಾಷ್ಟ್ರೀಯ ರೈಫಲ್ ಶೂಟಿಂಗ್ ಸಂಸ್ಥೆ (ಎನ್‌ಆರ್‌ಎಐ) ಶನಿವಾರ ತಂಡವನ್ನು ಪ‍್ರಕಟಿಸಿದೆ. ಮುಂದಿನ ವರ್ಷ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಈ ಏಷ್ಯನ್ ಕ್ರೀಡಾಕೂಟದಲ್ಲಿ 24 ಮಂದಿಗೆ ಅವಕಾಶ ಇದೆ. ಅದರಲ್ಲಿ 12 ವೈಯಕ್ತಿಕ ವಿಭಾಗದ ಸ್ಪರ್ಧೆಗಳಲ್ಲಿ ತಲಾ ಎರಡು ಸ್ಥಾನಗಳಿವೆ. ರೈಫಲ್, ಪಿಸ್ತೂಲ್ ಮತ್ತು ಶಾಟ್‌ಗನ್ ಸ್ಪರ್ಧೆಗಳು ಇವೆ. ಭಾರತವು 16 ಸ್ಪರ್ಧೆಗಳಲ್ಲಿ ಭಾಗವಹಿಸಲಿದೆ. ಇದರಲ್ಲಿ ಮಿಶ್ರ ವಿಭಾಗದ ನಾಲ್ಕು ಸ್ಪರ್ಧೆಗಳೂ ಇವೆ. ಈ ಬಾರಿ ತಂಡದಲ್ಲಿ ನಾಲ್ವರು ಹೆಚ್ಚುವರಿ ಶೂಟರ್‌ಗಳೂ ಇದ್ದಾರೆ. ರುದ್ರಾಂಕ್ಷ್ ಪಾಟೀಲ, ಮೆಹುಲಿ ಘೋಷ್, ಸಿಫ್ತ್ ಕೌರ್ ಸಮ್ರಾ ಹಾಗೂ ರಾಜೇಶ್ವರಿ ಕುಮಾರಿ ಅವರು ಸ್ಥಾನ ಗಳಿಸಿದ್ದಾರೆ. ಮನು ಭಾಕರ್, ದಿವ್ಯಾಂಶ್ ಸಿಂಗ್ ಪನ್ವರ್, ಐಶ್ವರ್ಯಾ ಪ್ರತಾಪ್ ಸಿಂಗ್ ತೋಮರ್, ಅಖಿಲ್ ಶೇರಾನ್, ರಿದಂ ಸಂಗ್ವಾನ್, ಈಶಾ ಸಿಂಗ್, ಆದರ್ಶ ಸಿಂಗ್, ಕೈನನ್ ಚೆನಾಯ್, ಗಣೇಮತ್ ಸೆಕಾನ್ ಅವರಿಗೆ ಪ್ಯಾರಿಸ್ ರಹದಾರಿ ಗಿಟ್ಟಿಸಲು ಇದೊಂದು ಉತ್ತಮ ಅವಕಾಶವಾಗಿದೆ. ಅಜರ್‌ಬೈಜಾನ್‌ನಲ್ಲಿ ಈಚೆಗೆ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಏಳು ಶೂಟರ್‌ಗಳು ಒಲಿಂಪಿಕ್ ಅರ್ಹತೆ ಗಿಟ್ಟಿಸಿದರು. ಭವನೀಶ್ ಮೆಡಿರಟಾ (ಪುರುಷರ ಟ್ರ್ಯಾಪ್), ರುದ್ರಾಂಕ್ಷ್ ಪಾಟೀಲ (ಪುರುಷರ 10 ಮೀ ರೈಫಲ್) ಮತ್ತು ಸ್ವಪ್ನಿಲ್ ಕುಶಾಲೆ (ಪುರುಷರ 50 ಮೀ ರೈಫಲ್, 3 ಪೊಸಿಷನ್ಸ್‌) ಹೋದ ವರ್ಷದ ಐಎಸ್‌ಎಸ್‌ಎಫ್‌ ವಿಶ್ವ ಶೂಟಿಂಗ್‌ನಲ್ಲಿ ಗೆದ್ದು ಪ್ಯಾರಿಸ್ ಒಲಿಂಪಿಕ್‌ಗೆ ಟಿಕೆಟ್‌ ಪಡೆದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.