ಪುರುಷರ 3000 ಮೀ. ಸ್ಟೀಪಲ್‌ಚೇಸ್‌ ಸ್ಪರ್ಧೆ: ಡೈಮಂಡ್‌ ಲೀಗ್‌ ಫೈನಲ್‌ಗೆ ಸಾಬ್ಳೆ ಷಾಮೆನ್ (ಚೀನಾ), (ಪಿಟಿಐ): ಭಾರತದ ಅವಿನಾಶ್ ಸಾಬ್ಳೆ, ಡೈಮಂಡ್‌ ಲೀಗ್‌ನ ಷಾಮೆನ್‌ ಲೆಗ್‌ನಲ್ಲಿ ಪುರುಷರ 3000 ಮೀ. ಸ್ಟೀಪಲ್‌ಚೇಸ್‌ ಸ್ಪರ್ಧೆಯಲ್ಲಿ ಐದನೇ ಸ್ಥಾನ ಪಡೆದು ಗಮನ ಸೆಳೆದರು. ಆ ಮೂಲಕ ಅಮೆರಿಕದ ಯುಜೀನ್‌ನಲ್ಲಿ ಈ ತಿಂಗಳ 16 ಮತ್ತು 17ರಂದು ನಡೆಯಲಿರುವ ಡೈಮಂಡ್‌ ಲೀಗ್‌ ಗ್ರ್ಯಾಂಡ್‌ ಫಿನಾಲೆಗೆ ಅರ್ಹತೆ ಸಂಪಾದಿಸಿದರು. ಕಳೆದ ತಿಂಗಳು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ನಿರಾಸೆ ಮೂಡಿಸಿದ್ದ 28 ವರ್ಷದ ಸಾಬ್ಳೆ, ಶನಿವಾರ ಈ ಓಟವನ್ನು ಪೂರೈಸಲು 8ನಿ.16.27 ಸೆಕೆಂಡು ತೆಗೆದುಕೊಂಡರು. ಇದು ಅವರು ಶ್ರೇಷ್ಠ ಸಾಧನೆಯೇನಲ್ಲ. ಈ ಋತುವಿನಲ್ಲಿ ಅವರ ಉತ್ತಮ ಸಾಧನೆ 8ನಿ.11.63 ಸೆ. ಹಾಗೂ ವೈಯಕ್ತಿಕ ಶ್ರೇಷ್ಠ ಸಾಧನೆ 8ನಿ.11.20 ಸೆ. ಆಗಿದೆ. ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್‌ ಸುಫಿಯಾನ್ ಅಲ್‌ ಬಕಾಲಿ (ಮೊರಾಕೊ) ಅವರು 8ನಿ.10.31 ಸೆ.ಗಳಲ್ಲಿ ಗುರಿತಲುಪಿ ಸ್ವರ್ಣ ಗೆದ್ದರು. ಇಥಿಯೋಪಿಯಾದ ಸಾಮ್ಯುಯೆಲ್ ಫಿರೆವು (8:11.29) ಎರಡನೇ ಮತ್ತು ಕೆನ್ಯಾದ ಅಮೊಸ್ ಸೆರೆಮ್ (8:14.41) ಮೂರನೇ ಸ್ಥಾನ ಪಡೆದರು. ಸಾಬ್ಳೆ ಈ ಋತುವಿನ ನಾಲ್ಕು ಕೂಟಗಳಿಂದ 11 ಪಾಯಿಂಟ್ಸ್‌ ಗಳಿಸಿ ಆರನೇಯವರಾಗಿ ಡೈಮಂಡ್‌ ಲೀಗ್‌ ಫಿನಾಲೆಗೆ ಅರ್ಹತೆ ಪಡೆದರು. ಇದು ಅವರ ಮೊದಲ ಡೈಮಂಡ್‌ ಲೀಗ್‌ ಫೈನಲ್ ಆಗಿದೆ. ಜಾವೆಲಿನ್ ಚಾಂಪಿಯನ್ ನೀರಜ್ ಚೋಪ್ರಾ (ಸೆ. 16) ಮತ್ತು ಲಾಂಗ್‌ ಜಂಪ್‌ ಪಟು ಮುರಳಿ ಶ್ರೀಶಂಕರ್ (ಸೆ. 17) ಅವರೂ ಫೈನಲ್‌ಗೆ ಅರ್ಹತೆ ಗಿಟ್ಟಿಸಿದ್ದಾರೆ. ಪುರುಷರ ಟ್ರಿಪಲ್‌ಜಂಪ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಪ್ರವೀಣ್ ಚಿತ್ರವೇಲ್ 16.42 ಮೀ. ಜಿಗಿದು ಐದನೇ ಸ್ಥಾನ ಪಡೆದರೆ, ಅಬ್ದುಲ್ಲಾ ಅಬೂಬಕ್ಕರ್ 16.25 ಮೀ. ಜಿಗಿದು ಆರನೇ ಸ್ಥಾನ ಪಡೆದರು. ಆದರೆ ಇವರು ಒಟ್ಟಾರೆ ಲೆಗ್‌ಗಳಲ್ಲಿ ತೋರಿದ ಸಾಧನೆ ಆಧಾರದಲ್ಲಿ 9 ಮತ್ತು 10ನೇ ಸ್ಥಾನ ಪಡೆದರು. ಓಟದ ಸ್ಪರ್ಧೆಗಳಲ್ಲಿ ಮೊದಲ 10 ಸ್ಥಾನ ಪಡೆದವರು ಮತ್ತು ಫೀಲ್ಡ್‌ (ಜಿಗಿತ, ಎಸೆತ) ಸ್ಪರ್ಧೆಗಳಲ್ಲಿ ಮೊದಲ ಆರು ಸ್ಥಾನ ಪಡೆದವರು ಡೈಮಂಡ್‌ ಲೀಗ್ ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.