ಚೆಸ್‌: ದಿವ್ಯಾ ದೇಶಮುಖ್‌ಗೆ ಪ್ರಶಸ್ತಿ ಕೋಲ್ಕತ್ತ: ಕೊನೆಗಳಿಗೆಯಲ್ಲಿ ಟೂರ್ನಿಯಲ್ಲಿ ಆಡುವ ಅವಕಾಶ ಪಡೆದ ಭಾರತದ ದಿವ್ಯಾ ದೇಶಮುಖ್ ಅವರು ಅಚ್ಚರಿ ಮೂಡಿಸುವ ರೀತಿ ಪ್ರಶಸ್ತಿಯನ್ನೇ ಗೆದ್ದುಕೊಂಡರು. ಶನಿವಾರ ಮುಕ್ತಾಯಗೊಂಡ ಟಾಟಾ ಸ್ಟೀಲ್‌ ಇಂಡಿಯಾ ರ್‍ಯಾಪಿಡ್‌ ಚೆಸ್‌ ಟೂರ್ನಿಯಲ್ಲಿ ನಾಗ್ಪುರದ ಈ ಆಟಗಾರ್ತಿ ಏಳು ಪಾಯಿಂಟ್ಸ್‌ ಸಂಗ್ರಹಿಸಿ ಅನಿರೀಕ್ಷಿತ ಚಾಂಪಿಯನ್ ಆದರು. ಆರ್‌.ಪ್ರಜ್ಞಾನಂದ ಅವರ ಸೋದರಿ ವಿಮೆನ್‌ ಗ್ರ್ಯಾಂಡ್‌ಮಾಸ್ಟರ್‌ ವೈಶಾಲಿ ಹಿಂದೆಸರಿದ ಕಾರಣ ದಿವ್ಯಾ ಅವರಿಗೆ ಕೊನೆಗಳಿಗೆಯಲ್ಲಿ ಈ ಟೂರ್ನಿಯಲ್ಲಿ ಆಡುವ ಅವಕಾಶ ದೊರಕಿತ್ತು. ಅವರಿಗೆ ಹತ್ತನೇ ಶ್ರೇಯಾಂಕ ನೀಡಲಾಗಿತ್ತು. ದಿವ್ಯಾ ಅಂತಿಮ (9ನೇ) ಸುತ್ತಿನಲ್ಲಿ ಕಪ್ಪುಕಾಯಿಗಳಲ್ಲಿ ಆಡಿ ಭಾರತದ ಗ್ರ್ಯಾಂಡ್‌ಮಾಸ್ಟರ್‌ ಕೊನೇರು ಹಂಪಿ ಅವರನ್ನು ಸೋಲಿಸಿ ಅಚ್ಚರಿಯ ಓಟ ಮುಂದುವರಿಸಿದರು. ಹಂಪಿ ಈ ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಪಡೆದಿದ್ದರು. ವಿಶ್ವ ಚಾಂಪಿಯನ್‌, ಚೀನಾದ ವೆನ್‌ಜುವಾನ್ (6.5) ಎರಡನೇ ಸ್ಥಾನ ಪಡೆದರು. ಕೊನೆಯ ಸುತ್ತಿನಲ್ಲಿ ವೆನ್‌ಜುವಾನ್‌ ಜಯಗಳಿಸಿದ್ದರೆ ಅವರೇ ಚಾಂಪಿಯನ್‌ ಆಗುವ ಅವಕಾಶವಿತ್ತು. ಆದರೆ ಕಳೆದ ಸಲದ ಚಾಂಪಿಯನ್‌ ಅನ್ನಾ ಉಷೇನಿನಾ (ಉಕ್ರೇನ್‌), ವೆನ್‌ಜುವಾನ್ ಜೊತೆ ಡ್ರಾ ಮಾಡಿಕೊಂಡಿದ್ದು ದಿವ್ಯಾ ಅವರ ಪ್ರಶಸ್ತಿ ಹಾದಿ ಸುಗಮಗೊಳಿಸಿತು. ಫಿಡೆ ಪ್ರತಿನಿಧಿಸಿದ ರಷ್ಯಾದ ಪೊಲಿನಾ ಶುವಲೋವಾ (5.5) ಅವರು ಮೂರನೇ ಸ್ಥಾನ ಪಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.