ಅರುಣಾಚಲ ವುಶು ಸ್ಪರ್ಧಿಗಳಿಗೆ ಏಷ್ಯನ್‌ ಗೇಮ್ಸ್‌ ಮಾನ್ಯತಾಪತ್ರ ನವದೆಹಲಿ: ಚೆಂಗ್ಡುವಿನಲ್ಲಿ ಜುಲೈ ತಿಂಗಳಲ್ಲಿ ನಡೆದಿದ್ದ ವಿಶ್ವ ಯುನಿವರ್ಸಿಟಿ ಕ್ರೀಡೆಗಳ ವೇಳೆ ಚೀನಾ ರಾಯಭಾರ ಕಚೇರಿಯಿಂದ ‘ಸ್ಟೇಪಲ್ಡ್‌ ವೀಸಾ’ ಪಡೆದಿದ್ದ ಅರುಣಾಚಲಪ್ರದೇಶದ ಮೂವರು ವುಶು ಸ್ಪರ್ಧಿಗಳಿಗೆ ಹಾಂಗ್‌ಜೌ ಏಷ್ಯನ್‌ ಗೇಮ್ಸ್‌ ಸಂಘಟಕರು ಮಾನ್ಯತಾಪತ್ರ (ಅಕ್ರೆಡಿಟೇಷನ್) ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ನ್ಯೇಮನ್ ವಾಂಗ್ಸು, ಒನಿಲು ತೆಗಾ ಮತ್ತು ಮೆಪುಂಗ್‌ ಲಮ್ಗು ಅವರು ಏಷ್ಯನ್‌ ಗೇಮ್ಸ್‌ಗೆ ಪ್ರಕಟಿಸಲಾಗಿರುವ 10 ಸದಸ್ಯರ ವುಶು ತಂಡದಲ್ಲಿದ್ದಾರೆ. ಏಷ್ಯನ್ ಗೇಮ್ಸ್‌ ಸೆ. 23 ರಿಂದ ಅ. 8ರವರೆಗೆ ನಡೆಯಲಿದೆ. ಜುಲೈ 27ರಂದು ಈ ಮೂವರಿಗೆ ಚೀನಾ ಸ್ಟೇಪಲ್ಡ್‌ ವೀಸಾ ನೀಡಿದ್ದ ಕಾರಣ ಭಾರತದ ಇಡಿ ವುಶು ತಂಡ ಸ್ಪರ್ಧೆಯಿಂದ ಹಿಂದೆಸರಿದಿತ್ತು. ಪಾಸ್‌ಪೋರ್ಟ್‌ನಲ್ಲಿ ನೇರವಾಗಿ ಮೊಹರು ಹಾಕುವ ಬದಲು ಮೊಹರಿನ ಹಾಳೆಯನ್ನು ಪಾಸ್‌ಪೋರ್ಟ್‌ಗೆ ಪಿನ್ ಮಾಡಲಾಗಿರುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.