ಏಷ್ಯನ್‌ ಕ್ರೀಡಾಕೂಟ: ಭಾರತ ತಂಡದಲ್ಲಿ ಅಮ್ಲಾನ್‌ಗೆ ಅವಕಾಶ ನವದೆಹಲಿ: ಭಾರತದ ಅಗ್ರ ಓಟಗಾರ ಅಮ್ಲಾನ್ ಬೊರ್ಗೊಹೈನ್ ಅವರನ್ನು ಏಷ್ಯನ್‌ ಕ್ರೀಡಾಕೂಟದಲ್ಲಿ ಭಾಗವಹಿಸುವ ಭಾರತ ತಂಡದಲ್ಲಿ ಸೇರಿಸಲಾಗುವುದು ಎಂದು ಭಾರತ ಅಥ್ಲೆಟಿಕ್ ಫೆಡರೇಷನ್ (ಎಎಫ್‌ಐ) ಅಧ್ಯಕ್ಷ ಆದಿಲ್ ಸುಮರಿವಾಲಾ ತಿಳಿಸಿದ್ದಾರೆ. ಏಷ್ಯನ್‌ ಗೇಮ್ಸ್‌ನಲ್ಲಿ ಸ್ಪರ್ಧಿಸುವ ಆಟಗಾರರ ಪಟ್ಟಿಯನ್ನು ಕೆಲ ದಿನಗಳ ಹಿಂದೆ ಕ್ರೀಡಾ ಸಚಿವಾಲಯ ಬಿಡುಗಡೆ ಮಾಡಿತ್ತು. 65 ಸದಸ್ಯರನ್ನು ಒಳಗೊಂಡ ಅಥ್ಲೆಟಿಕ್ಸ್‌ ತಂಡದಲ್ಲಿ ಅಸ್ಸಾಂನ ಅಥ್ಲೀಟ್ ಅಮ್ಲಾನ್ ಹೆಸರು ಇರಲಿಲ್ಲ. ‘ಏಷ್ಯನ್‌ ಗೇಮ್ಸ್‌ಗಾಗಿ ಎಎಫ್‌ಐ ನಿಗದಿಪಡಿಸಿದ ಅರ್ಹತಾ ಸಮಯವನ್ನು ಮುಟ್ಟಲು ಸಾಧ್ಯವಾಗದ ಕಾರಣ ಅವರನ್ನು ಈ ಹಿಂದೆ ಕೈಬಿಡಲಾಗಿತ್ತು’ ಎಂದು ಸುಮರಿವಾಲಾ ಸ್ಪಷ್ಟಪಡಿಸಿದ್ದಾರೆ. ಏಷ್ಯನ್ ಗೇಮ್ಸ್‌ಗೆ ಆಯ್ಕೆಗಾಗಿ ಭುವನೇಶ್ವರದಲ್ಲಿ ಈಚೆಗೆ ನಡೆದಿದ್ದ ರಾಷ್ಟ್ರೀಯ ಅಂತರ ರಾಜ್ಯ ಚಾಂಪಿಯನ್‌ಷಿಪ್‌ನಲ್ಲಿ ಅಮ್ಲಾನ್ ಪುರುಷರ 200 ಮೀಟರ್ ಓಟದಲ್ಲಿ ಚಿನ್ನ ಗೆದ್ದಿದ್ದರು. ಅವರು 20.71 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದ್ದರು. ಆದರೆ, ಏಷ್ಯನ್ ಗೇಮ್ಸ್ ಅರ್ಹತಾ ಸಮಯ 20.61 ಸೆಕೆಂಡ್‌ ನಿಗದಿಯಾಗಿತ್ತು. 25 ವರ್ಷದ ಅಮ್ಲಾನ್ ಅವರು ಪುರುಷರ 200 ಮೀಟರ್ ದೂರವನ್ನು 20.52 ಸೆಕೆಂಡುಗಳಲ್ಲಿ ಕ್ರಮಿಸಿ ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ. ಅಲ್ಲದೆ, 10.25 ಸೆಕೆಂಡುಗಳಲ್ಲಿ 100 ಮೀಟರ್ ಕ್ರಮಿಸಿ ರಾಷ್ಟ್ರೀಯ ದಾಖಲೆಯನ್ನೂ ಹೊಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.