| ಚೀನಾಕ್ಕೆ ತೆರಳಿದ ರೋಯಿಂಗ್ ತಂಡ ಮುಂಬೈ: ಇದೇ ತಿಂಗಳ 23ರಂದು ಆರಂಭವಾಗುವ ಏಷ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲು 43 ಸದಸ್ಯರ ಭಾರತ ರೋಯಿಂಗ್ ತಂಡ ಕ್ರೀಡಾಕೂಟ ನಡೆಯುವ ಸ್ಥಳವಾದ ಚೀನಾದ ಹಾಂಗ್‌ಜೌಗೆ ತೆರಳಿತು. ಈ ತಂಡದಲ್ಲಿ 10 ಮಂದಿ ನೆರವು ಸಿಬ್ಬಂದಿ ಇದ್ದಾರೆ. ತಂಡದಲ್ಲಿ 20 ಮಂದಿ ಪುರುಷ ಮತ್ತು 13 ಮಂದಿ ಮಹಿಳಾ ಸ್ಪರ್ಧಿಗಳಿದ್ದು, ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ವಾರದ ಕಾಲ ನಡೆಯುವ ತರಬೇತಿ ಶಿಬಿರದಲ್ಲಿ ಭಾಗಿಯಾಗಲಿದ್ದಾರೆ. ಸರ್ಕಾರ ಈ ಶಿಬಿರಕ್ಕೆ ಒಂದು ಕೋಟಿ ರೂಪಾಯಿ ಮಂಜೂರು ಮಾಡಿದೆ. ಶಿಬಿರದ ನಂತರ 16ರಂದು ಈ ತಂಡ ಕ್ರೀಡಾಗ್ರಾಮಕ್ಕೆ ತೆರಳಲಿದೆ. ಈ ಕೂಟದಲ್ಲಿ ಮೊದಲ ಬಾರಿ ಮಹಿಳೆಯರ ಎಂಟು ಮಂದಿಯ ತಂಡದ ಸ್ಪರ್ಧೆ ಇರುವ ಕಾರಣ ಭಾರತ ಏಷ್ಯಾಡ್‌ಗೆ ಇದುವರೆಗಿನ ದೊಡ್ಡ ಮಹಿಳಾ ತಂಡ ಕಳುಹಿಸುತ್ತಿದೆ. ರೋಯಿಂಗ್ ತಂಡಕ್ಕೆ ಭಾರತ ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳು ಬುಧವಾರ ಬೀಳ್ಕೊಡುಗೆ ನೀಡಿದರು. ಈ ವಾರದ ಆರಂಭದಲ್ಲಿ ಭಾರತದ ಸೇಲರ್‌ಗಳು ಮತ್ತು ಬಾಕ್ಸರ್‌ಗಳ ಮೊದಲ ತಂಡ ಚೀನಾಕ್ಕೆ ತೆರಳಿದ್ದು ಅಲ್ಲಿ ತರಬೇತಿ ಪಡೆಯಲಿದೆ. ಬಾಕ್ಸರ್‌ಗಳು ವುಯಿಶಾನ್ ನಗರದಲ್ಲಿ ಮತ್ತು ಸೇಲರ್‌ಗಳು ನಿಂಗ್ಬೊ ಕ್ಸಿಯಾಂಗ್‌ಶಾನ್ ಸೇಲಿಂಗ್‌ ಸೆಂಟರ್‌ನಲ್ಲಿ ತರಬೇತಿ ನಡೆಯಲಿದ್ದಾರೆ. ಏಷ್ಯನ್‌ ಗೇಮ್ಸ್‌ ಸ್ಪರ್ಧೆಗಳೂ ಇದೇ ಸ್ಥಳದಲ್ಲಿ ನಿಗದಿಯಾಗಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.