ಏಷ್ಯನ್‌ ಟಿಟಿ: ಸುತೀರ್ಥಾಗೆ ಗೆಲುವು ಪ್ಯೊಂಗ್‌ಚಾಂಗ್‌, ದಕ್ಷಿಣ ಕೊರಿಯಾ: ಭಾರತದ ಸುತೀರ್ಥಾ ಮುಖರ್ಜಿ ಅವರು ಇಲ್ಲಿ ನಡೆಯುತ್ತಿರುವ ಏಷ್ಯನ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ತನಗಿಂತ ಮೇಲಿನ ರ‍್ಯಾಂಕ್‌ನ ಆಟಗಾರ್ತಿಯರನ್ನು ಮಣಿಸಿ 32ರ ಸುತ್ತು ಪ್ರವೇಶಿಸಿದರು. ಗುರುವಾರ ನಡೆದ ಪಂದ್ಯದಲ್ಲಿ ಮೊದಲ ಗೇಮ್‌ನಲ್ಲಿ ಸೋತರೂ ತಿರುಗೇಟು ನೀಡಿ 10-12, 11-8, 11-7, 11-7 ರಿಂದ ಚೀನಾ ತೈಪೆಯ ಸು ಯು ಚೆನ್‌ ಅವರಿಗೆ ಆಘಾತ ನೀಡಿದರು. ವಿಶ್ವ ರ್‍ಯಾಂಕಿಂಗ್‌ನಲ್ಲಿ 104ನೇ ಸ್ಥಾನದಲ್ಲಿರುವ ಸುತೀರ್ಥಾ, 40ನೇ ರ್‍ಯಾಂಕ್‌ನ ಆಟಗಾರ್ತಿ ವಿರುದ್ಧ ಶಿಸ್ತಿನ ಆಟವಾಡಿದರು. ಐಹಿಕಾ ಮುಖರ್ಜಿ 11-2, 11-0, 11-1 ರಿಂದ ನೇಪಾಳದ ಸುವಲ್ ಸಿಕ್ಕಾ ವಿರುದ್ಧ ಸುಲಭ ಗೆಲುವು ಪಡೆದು ಮುನ್ನಡೆದರು. ಆದರೆ ಸಿಂಗಲ್ಸ್‌ ವಿಭಾಗದಲ್ಲಿ ಕಣದಲ್ಲಿದ್ದ ಭಾರತದ ಇತರರಿಗೆ ನಿರಾಸೆ ಎದುರಾಯಿತು. ಶ್ರೀಜಾ ಅಕುಲಾ 5-11, 6-11, 9-11 ರಿಂದ ಜಪಾನ್‌ನ ಮಿಮಾ ಇಟೊ ಎದುರು ಸೋತರೆ, ದಿಯಾ ಚಿತಳೆ 3–11, 6–11, 8–11 ರಿಂದ ಚೀನಾದ ಚೆನ್‌ ಮೆಂಗ್‌ ಕೈಯಲ್ಲಿ ಪರಾಭವಗೊಂಡರು. ಥಾಯ್ಲೆಂಡ್‌ನ ಜಿನಿಪಾ ಸವೆಟಾಬುಟ್‌ ವಿರುದ್ಧ ಆಡಬೇಕಿದ್ದ ಭಾರತದ ಅಗ್ರ ರ್‍ಯಾಂಕ್‌ನ ಆಟಗಾರ್ತಿ ಮಣಿಕಾ ಬಾತ್ರಾ ಅವರು ಎದುರಾಳಿಗೆ ‘ವಾಕ್‌ ಓವರ್‌’ ನೀಡಿದರು. ಕ್ವಾರ್ಟರ್‌ಗೆ ಮಾನವ್‌– ಮಾನುಷ್: ಭಾರತದ ಮಾನವ್‌ ಠಕ್ಕರ್‌ ಮತ್ತು ಮಾನುಷ್‌ ಶಾ ಅವರು ಪುರುಷರ ಡಬಲ್ಸ್‌ ವಿಭಾಗದಲ್ಲಿ ಉಜ್ಬೆಕಿಸ್ತಾನದ ಅಬ್ದುಲ್‌ಅಜೀಜ್ ಅನೊರ್ಬೊಯೆ– ಕುತ್ಬುದಿಲೊ ತೆಶಬೊವ್‌ ಅವರನ್ನು ಮಣಿಸಿ ಪುರುಷರ ಡಬಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಮಹಿಳೆಯರ ಡಬಲ್ಸ್‌ನಲ್ಲಿ ಐಹಿಕಾ ಮತ್ತು ಸುತೀರ್ಥಾ ಮುಖರ್ಜಿ ಜೋಡಿ 11-1, 13-11, 10-12, 11-7 ರಿಂದ ಕಜಕಸ್ತಾನದ ಏಂಜೆಲಿನಾ ರೊಮನೊವ್‌ಸ್ಕ– ಸರ್ವಿನೊಜ್ ಮಿರ್ಕದಿರೊವಾ ವಿರುದ್ಧ ಗೆದ್ದು ಎಂಟರಘಟ್ಟದಲ್ಲಿ ಸ್ಥಾನ ಪಡೆಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.