ಟಾಟಾ ಸ್ಟೀಲ್‌ ಇಂಡಿಯಾ ಚೆಸ್‌: ಮ್ಯಾಕ್ಸಿಂ ಲಗ್ರಾವ್‌ಗೆ ಪ್ರಶಸ್ತಿ ಕೋಲ್ಕತ್ತ: ಕೊನೆಯ ದಿನವೂ ಪ್ರಾಬಲ್ಯ ಮುಂದುವರಿಸಿದ ಫ್ರಾನ್ಸ್‌ನ ಗ್ರ್ಯಾಂಡ್‌ಮಾಸ್ಟರ್‌ ಮ್ಯಾಕ್ಸಿಮ್‌ ವಾಷಿಯರ್ ಲಗ್ರಾವ್, ‘ಟಾಟಾ ಸ್ಟೀಲ್ ಚೆಸ್‌ ಇಂಡಿಯಾ 2023’ ರ‍್ಯಾಪಿಡ್‌ ಟೂರ್ನಿಯಲ್ಲಿ ಗುರುವಾರ ಪ್ರಶಸ್ತಿ ಗೆದ್ದುಕೊಂಡರು. ವಿಶ್ವ ಬ್ಲಿಟ್ಸ್‌ ಮಾಜಿ ಚಾಂಪಿಯನ್‌ ಆಗಿರುವ ಲಗ್ರಾವ್‌ ಮೂರು ದಿನಗಳ ಟೂರ್ನಿಯಲ್ಲಿ ಏಳು ಪಾಯಿಂಟ್ಸ್‌ ಸಂಗ್ರಹಿಸಿದರು. ಅವರಿಗಿಂತ ಸಾಕಷ್ಟು ಹಿಂದೆ ಉಳಿದ ಅಜರ್‌ಬೈಜಾನ್‌ನ ಗ್ರ್ಯಾಂಡ್‌ಮಾಸ್ಟರ್‌ ತೈಮೋರ್‌ ರಾಜಾಬೋವ್ ಅವರು 5.5 ಪಾಯಿಂಟ್ಸ್‌ ಗಳಿಸಿ ಎರಡನೇ ಸ್ಥಾನ ಪಡೆದರು. ಭಾರತದ ಚೆಸ್‌ ತಾರೆ ಆರ್‌.ಪ್ರಜ್ಞಾನಂದ, ಫಿಡೆ ಪ್ರತಿನಿಧಿಸುತ್ತಿರುವ (ರಷ್ಯಾ ಮೂಲದ) ಅಲೆಕ್ಸಾಂಡರ್‌ ಗ್ರಿಶ್ಚುಕ್ ಮತ್ತು ಭಾರತದ ವಿದಿತ್‌ ಗುಜರಾತಿ ಅವರು ತಲಾ ಐದು ಅಂಕಗಳನ್ನು ಪಡೆದರು. ಆದರೆ ಟೈಬ್ರೇಕ್‌ ಆಧಾರದ ಮೇಲೆ ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಸ್ಥಾನ ಪಡೆದರು. ವಿಶ್ವಕಪ್‌ ರನ್ನರ್‌ ಅಪ್‌ ಆಗಿರುವ ಪ್ರಗ್ಗು ಗುರುವಾರ ಎರಡು ಪಂದ್ಯ ಗೆದ್ದರೂ, ಬಹುನಿರೀಕ್ಷಿತ ಪಂದ್ಯದಲ್ಲಿ ಭಾರತದ ಅಗ್ರಮಾನ್ಯ ಆಟಗಾರ ಡಿ.ಗುಕೇಶ್ ಎದುರು 45 ನಡೆಗಳಲ್ಲಿ ಸೋಲನುಭವಿಸಿದರು. 18 ವರ್ಷದ ಪ್ರಜ್ಞಾನಂದ ದಿನದ ಮೊದಲ ಪಂದ್ಯದಲ್ಲಿ ವಿದಿತ್ ಗುಜರಾತಿ ಅವರನ್ನು 38 ನಡೆಗಳಲ್ಲಿ ಸೋಲಿಸಿದರು. ಗುಕೇಶ್ ಎದುರು ಪಂದ್ಯ ಸೋತರೂ ಪ್ರಜ್ಞಾನಂದ ತಮ್ಮ ಕೊನೆಯ ಪಂದ್ಯದಲ್ಲಿ ಸ್ವದೇಶದ ಅರ್ಜುನ್‌ ಎರಿಗೇಶಿ ಅವರನ್ನು 39 ನಡೆಗಳಲ್ಲಿ ಮಣಿಸಿದರು. ಬೀಲ್‌ ಗ್ರ್ಯಾಂಡ್‌ಮಾಸ್ಟರ್ಸ್ ಚೆಸ್‌ ಟೂರ್ನಿಯಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಮ್ಯಾಕ್ಸಿಮ್‌ ಲಗ್ರಾವ್‌ ತಮ್ಮ ಮೊದಲ ಪಂದ್ಯದಲ್ಲಿ ಅರ್ಜುನ್ ಎರಿಗೇಶಿ ಅವರನ್ನು ಸೋಲಿಸಿದರು. ನಂತರ ಭಾರತದ ಇನ್ನೊಬ್ಬ ಆಟಗಾರ ಪೆಂಟ್ಯಾಲ ಹರಿಕೃಷ್ಣ ಅವರ ಮೇಲೆ ಗೆಲುವು ಪಡೆದು ಒಂದು ಸುತ್ತು ಉಳಿದಿರುವಂತೆಯೇ ಪ್ರಶಸ್ತಿ ಖಚಿತಪಡಿಸಿಕೊಂಡರು. ಹೀಗಾಗಿ ತಮ್ಮ ಕೊನೆಯ ಪಂದ್ಯವನ್ನು ಆರೇ ನಡೆಗಳಲ್ಲಿ ರಾಜಾಬೋವ್ ವಿರುದ್ಧ ಡ್ರಾ ಮಾಡಿಕೊಂಡರು. ರಾಜಾಬೋವ್ ವಿರುದ್ಧ ಮೊದಲ ಪಂದ್ಯ ಡ್ರಾ ಮಾಡಿಕೊಂಡಿದ್ದ ಗುಕೇಶ್, ಕೊನೆಯ ಪಂದ್ಯದಲ್ಲಿ ಜರ್ಮನಿಯ ಯುವಪ್ರತಿಭೆ ವಿನ್ಸೆಂಟ್ ಕೀಮರ್ ಎದುರು ಸೋತು ಒಟ್ಟು 4.5 ಅಂಕಗಳೊಡನೆ ಆರನೇ ಸ್ಥಾನಕ್ಕೆ ಸರಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.