: 10ನೇ ಸಲ ಒಲಿಂಪಿಕ್ಸ್‌ ಕಣಕ್ಕಿಳಿದ 55 ವರ್ಷದ ಜಾರ್ಜಿಯಾದ ಶೂಟರ್ ಶಾತೊಹು (ಫ್ರಾನ್ಸ್‌): ನೀನೊ ಸಾಲುಕ್‌ವಾಡ್ಜ್‌ ಒಲಿಂಪಿಕ್ಸ್‌ನಲ್ಲಿ ಮೂರು ಪದಕಗಳನ್ನು ಗೆದ್ದ ಜಾರ್ಜಿಯಾದ ಶೂಟರ್‌. ಕಳೆದ ಬಾರಿ ಒಂಬತ್ತನೇ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಅವರು ವಿದಾಯ ಹೇಳಬಯಸಿದ್ದರು. ಆದರೆ ನಿಧನರಾದ ತಂದೆಯ ಅಂತಿಮ ಇಚ್ಛೆ ಈಡೇರಿಸಲು ಹತ್ತನೇ ಬಾರಿ ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿದಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಜಾರ್ಜಿಯಾದ ಧ್ವಜಧಾರಿಯಾಗಿದ್ದ ನೀನೊ, ಹತ್ತು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಮೊದಲ ಮಹಿಳೆ. ಮತ್ತು ಒಟ್ಟಾರೆ ಎರಡನೇ ಸ್ಪರ್ಧಿ. ಈಕ್ವೆಸ್ಟ್ರಿಯನ್‌ ಶೊ ಜಂಪರ್‌ ಇಯಾನ್‌ ಮಿಲ್ಲರ್‌ ಮಾತ್ರ 10 ಒಲಿ‌ಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು. 55 ವರ್ಷ ವಯಸ್ಸಿನ ನೀನೊ 1988ರ ಸೋಲ್‌ ಕ್ರೀಡೆಗಳಲ್ಲಿ 25 ಮೀ.ಪಿಸ್ತೂಲ್‌ನಲ್ಲಿ ಸ್ವರ್ಣ, 10 ಮೀ. ಏರ್‌ಪಿಸ್ತೂಲ್‌ನಲ್ಲಿ ಬೆಳ್ಳಿ ಗಳಿಸಿದ್ದರು. ಆ ಬಾರಿ ಅವರು ಅವಿಭಜಿತ ರಷ್ಯಾವನ್ನು ಪ್ರತಿನಿಧಿಸಿದ್ದರು. 20 ವರ್ಷ ಬಳಿಕ ಬೀಜಿಂಗ್‌ ಕ್ರೀಡೆಗಳಲ್ಲಿ ಜಾರ್ಜಿಯಾವನ್ನು ಪ್ರತಿನಿಧಿಸಿ ಕಂಚಿನ ಪದಕ ಕೊರಳಿಗೇರಿಸಿಕೊಂಡಿದ್ದರು. ‘ನನ್ನ ತಂದೆ ವಕ್ತಾಂಗ್‌ ಸಾಲುಕ್‌ವಾಡ್ಜ್‌ ನನ್ನಿಂದ ಬೇರೇನನ್ನೂ ಕೇಳಲಿಲ್ಲ. ಒಲಿಂಪಿಕ್ಸ್‌ನಲ್ಲಿ ಇನ್ನೊಮ್ಮೆ ಪಾಲ್ಗೊಳ್ಳಬೇಕೆಂಬುದು ಅವರ ಕಡೆಯ ಆಸೆಯಾಗಿತ್ತು’ ಎಂದು ನೆನಪಿಸಿದರು. 25 ಮೀ. ಪಿಸ್ತೂಲ್‌ ಸ್ಪರ್ಧೆಯಲ್ಲಿ ಜೂನಿಯರ್‌ ವಿಶ್ವದಾಖಲೆ ಈಗಲೂ ಅವರ ಹೆಸರಿನಲ್ಲಿದೆ. ನೀನೊ ಅವರು ಶುಕ್ರವಾರ 25 ಮೀ. ಪಿಸ್ತೂಲ್‌ ಕ್ವಾಲಿಫಿಕೇಷನ್ ಸುತ್ತಿನಲ್ಲಿ ಭಾಗವಹಿಸಲಿದ್ದಾರೆ. ಭಾರತದ ತಾರೆ ಮನು ಭಾಕರ್ ಅವರೂ ಇಲ್ಲಿ ಕಣಕ್ಕಿಳಿಯಲಿದ್ದಾರೆ. ಅವರ ಮಗ ತ್ಸೊತ್ನೆ ಮಚಾವರಿಯಾನಿ ಕೂಡ ಪಿಸ್ತೂಲ್ ಶೂಟರ್‌ ಆಗಿದ್ದು ರಿಯೊ ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿದಿದ್ದರು. ತಾಯಿ– ಮಗ ಇಬ್ಬರೂ ಭಾಗವಹಿಸಿದ್ದು ವಿಶೇಷ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.