ಚೀನಾ ಓಪನ್‌ ಸೂಪರ್‌ ಬ್ಯಾಡ್ಮಿಂಟನ್‌: ಮೊದಲ ಸುತ್ತಲ್ಲೇ ಪ್ರಣಯ್‌, ಸೇನ್‌ಗೆ ಆಘಾತ ಹಾಂಗ್‌ಝೌ: ಚೀನಾ ಓಪನ್‌ ಸೂಪರ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಮೊದಲ ದಿನವೇ ಭಾರತದ ಆಟಗಾರರು ವೈಫಲ್ಯ ಅನುಭವಿಸಿದರು. ಎಚ್‌.ಎಸ್‌. ಪ್ರಣಯ್‌, ಲಕ್ಷ ಸೇನ್‌, ಪ್ರಿಯಾಂಶು ರಾಜಾವತ್‌ ಸೇರಿದಂತೆ ಭರವಸೆಯ ಆಟಗಾರರು ಮಂಗಳವಾರ ಮೊದಲ ಸುತ್ತಿನಲ್ಲೇ ಅನಿರೀಕ್ಷಿತ ಸೋಲಿನೊಡನೆ ನಿರ್ಗಮಿಸಿದರು. ಪುರುಷರ ಡಬಲ್ಸ್‌ನಲ್ಲಿ ವಿಶ್ವದ ಎರಡನೇ ಕ್ರಮಾಂಕದ ಜೋಡಿ ಸಾತ್ವಿಕ್‌ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರನ್ನು ಹೊರತುಪಡಿಸಿ, ಭಾರತದ ಇತರ ಆಟಗಾರರ ಸವಾಲು ಅಂತ್ಯಗೊಂಡಿದೆ. ಅವರು ಬುಧವಾರ ಮೊದಲ ಸುತ್ತಿನಲ್ಲಿ ಇಂಡೋನೇಷ್ಯಾದ ಮುಹಮ್ಮದ್ ಶೋಹಿಬುಲ್ ಫಿಕ್ರಿ ಮತ್ತು ಬಗಾಸ್ ಮೌಲಾನಾ ಅವರನ್ನು ಎದುರಿಸಲಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತ ಪ್ರಣಯ್‌ ಅವರು ಪುರುಷರ ಸಿಂಗಲ್ಸ್‌ನಲ್ಲಿ ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದರು. ಈ ಋತುವಿನಲ್ಲಿ ಉತ್ತಮ ಲಯದಲ್ಲಿದ್ದು ವೃತ್ತಿಜೀವನದಲ್ಲೇ ಶ್ರೇಷ್ಠ ರ‍್ಯಾಂಕಿಂಗ್‌ (6ನೇ) ಪಡೆದಿರುವ ಪ್ರಣಯ್‌, 22ನೇ ಕ್ರಮಾಂಕದ ಎನ್‌ಜಿ ತ್ಸೆ ಯೊಂಗ್‌ (ಮಲೇಷ್ಯಾ) ಅವರಿಗೆ ಮಣಿದರು. ಒಂದು ಗಂಟೆ ಆರು ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಪ್ರಣಯ್‌ 12–21, 21–13, 18–21ರಿಂದ ಪರಾಭವಗೊಂಡರು. ಲಕ್ಷ್ಯ ಸೇನ್ ಅವರು ಡೆನ್ಮಾರ್ಕ್‌ನ ಆ್ಯಂಡರ್ಸ್ ಆಂಟೊನ್ಸೆನ್ ವಿರುದ್ಧ ಮೂರು ಗೇಮ್‌ಗಳ ಹೋರಾಟದಲ್ಲಿ ಪರಾಭವಗೊಂಡರು. ಒಂದು ಗಂಟೆ 18 ನಿಮಿಷಗಳ ಹೋರಾಟದಲ್ಲಿ 21-23, 21-16, 9-21ರಿಂದ ಮಣಿದರು. ಮೊದಲ ಗೇಮ್‌ನಲ್ಲಿ ತೀವ್ರ ಸ್ಪರ್ಧೆ ನೀಡಿದ ಸೇನ್‌, ಎರಡನೇ ಗೇಮ್‌ನಲ್ಲಿ ಹಿಡಿತ ಸಾಧಿಸಿದರು. ಆದರೆ, ಮೂರನೇ ಗೇಮ್‌ನಲ್ಲಿ ಡೆನ್ಮಾರ್ಕ್‌ ಆಟಗಾರ ಮೇಲುಗೈ ಸಾಧಿಸಿ, ಎರಡನೇ ಸುತ್ತು ಪ್ರವೇಶಿದರು. ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಮತ್ತೊಬ್ಬ ಆಟಗಾರ ಪ್ರಿಯಾಂಶು ರಾಜಾವತ್‌ ಅವರೂ ನಿರ್ಗಮಿಸಿದರು. ಅವರು 13–21, 24–26ರಿಂದ ಇಂಡೋನೇಷ್ಯಾದ ಶೇಸರ್ ಹಿರೇನ್ ರುಸ್ತಾವಿಟೊ ಎದುರು ಸೋತರು. ಡಬಲ್ಸ್‌ನಲ್ಲೂ ನಿರಾಸೆ: ಮಹಿಳೆಯರ ಡಬಲ್ಸ್‌ನಲ್ಲಿ ಭಾರತದ ಟ್ರೀಸಾ ಜೋಲಿ ಮತ್ತು ಗಾಯತ್ರಿ ಗೋಪಿಚಂದ್‌ ಜೋಡಿ ನಿರಾಸೆ ಅನುಭವಿಸಿತು. ಅವರು 18-21 11-21ರಿಂದ ಚೀನಾದ ಚೆನ್ ಕ್ವಿಂಗ್ ಚೆನ್ ಮತ್ತು ಜಿಯಾ ಯಿ ಫ್ಯಾನ್ ಜೋಡಿಗೆ ಶರಣಾದರು. ಪುರುಷರ ಡಬಲ್ಸ್‌ನಲ್ಲಿ ಭಾರತದ ಎಂ.ಆರ್. ಅರ್ಜುನ್ –ಧ್ರುವ್ ಕಪಿಲ ಜೋಡಿ 23–21, 21–19ರಿಂದ ಜಪಾನಿನ ಕಿಚಿರೊ ಮಾಟ್ಸುಯಿ ಮತ್ತು ಯೊಶಿನೋರಿ ಟಕೆಯುಚಿ ಅವರಿಗೆ ಮಣಿಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.