ಏಷ್ಯನ್‌ ಗೇಮ್ಸ್‌ನಲ್ಲಿ ಪದಕದ ಗುರಿ: ಲಾಂಗ್‌ ಜಂಪ್ ಅಥ್ಲೀಟ್ ಮುರಳಿ ಶ್ರೀಶಂಕರ್ ಬೆಂಗಳೂರು: ‘ಸೆ.23ರಂದು ಹಾಂಗ್‌ಝೌನಲ್ಲಿ ಆರಂಭವಾಗುವ ಏಷ್ಯನ್‌ ಗೇಮ್ಸ್‌ನಲ್ಲಿ ಹಾಗೂ ಮುಂದಿನ ವರ್ಷ ಪ್ಯಾರಿಸ್‌ನಲ್ಲಿ ನಡೆಯುವ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗಳಿಸುವ ನಿಟ್ಟಿನಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಿಕೊಂಡಿದ್ದೇನೆ. ಆ ಗುರಿ ಸಾಧಿಸುವ ಅಚಲವಾದ ವಿಶ್ವಾಸವನ್ನೂ ಹೊಂದಿದ್ದೇನೆ’ ಎಂದು ಭಾರತದ ಭರವಸೆಯ ಲಾಂಗ್‌ಜಂಪ್ ಅಥ್ಲೀಟ್ ಮುರಳಿ ಶ್ರೀಶಂಕರ್ ಹೇಳಿದರು. ನಗರದ ತಾಜ್‌ ಹೋಟೆಲ್‌ನಲ್ಲಿ ಶುಕ್ರವಾರ ಡ್ಯುರೊಫ್ಲೆಕ್ಸ್ ಮತ್ತು ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ ನಡುವೆ ಪಾಲುದಾರಿಕೆ ಒಪ್ಪಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ‘ಪ್ರಜಾವಾಣಿ’ ಜತೆ ಮಾತನಾಡಿದರು. ಅಮೆರಿಕದ ಯೂಜಿನ್‌ನಲ್ಲಿ ಸೆ.17ರಂದು ನಡೆಯಲಿರುವ ಪ್ರತಿಷ್ಠಿತ ಡೈಮಂಡ್ ಲೀಗ್‌ ಫೈನಲ್‌ಗೆ ಅರ್ಹತೆ ಲಭಿಸಿದ್ದರೂ ಕೂಟದಿಂದ ಹಿಂದೆ ಸರಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಪ್ಯಾರಿಸ್‌ನಲ್ಲಿ ನಡೆದಿದ್ದ ಕೂಟದಲ್ಲಿ ಮೂರನೇ ಸ್ಥಾನ, ಜ್ಯೂರಿಚ್‌ನಲ್ಲಿ ನಡೆದ ಕೂಟದಲ್ಲಿ ಐದನೇ ಸ್ಥಾನ ಪಡೆದಿದ್ದೆ. ಈ ಸಾಧನೆಯಿಂದ ಫೈನಲ್‌ಗೂ ಅರ್ಹತೆ ಗಳಿಸಿದ್ದೆ. ಆದರೆ, ತಕ್ಷಣಕ್ಕೆ ನನ್ನ ಗುರಿ ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಗೆಲ್ಲುವುದು. ಅದಕ್ಕಾಗಿ ಈ ನಿರ್ಧಾರ ಕೈಗೊಳ್ಳಬೇಕಾಯಿತು’ ಎಂದು ತಿಳಿಸಿದರು. ‘ಅಮೆರಿಕದಲ್ಲಿ ನಡೆಯುವ ಡೈಮಂಡ್‌ ಲೀಗ್‌ ಕೂಟದಲ್ಲಿ ಪಾಲ್ಗೊಂಡು ಮತ್ತೆ ಚೀನಾಕ್ಕೆ ಹೋಗಬೇಕಾದರೆ ದೀರ್ಘ ಪ್ರಯಾಣ ಅನಿವಾರ್ಯ. ಅದರಿಂದ ದೈಹಿಕ ಸಾಮರ್ಥ್ಯ ಮತ್ತು ಅಭ್ಯಾಸದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ, ಒಲ್ಲದ ಮನಸ್ಸಿನಿಂದ ಕೂಟದಿಂದ ಹಿಂದೆ ಸರಿದಿದ್ದೇನೆ’ ಎಂದರು. ‘ಏಷ್ಯನ್‌ ಗೇಮ್ಸ್‌ನ ಲಾಂಗ್‌ಜಂಪ್‌ ಸ್ಪರ್ಧೆಯಲ್ಲಿ ನಾನು ಮತ್ತು ಜೆಸ್ವಿನ್‌ ಆಲ್ಡ್ರಿನ್‌ ಭಾರತವನ್ನು ಪ್ರತಿನಿಧಿಸುತ್ತಿದ್ದು, ಅಲ್ಲೂ ಕಠಿಣ ಪೈಪೋಟಿಯ ನಿರೀಕ್ಷೆಯಿದೆ. ಆದರೂ ಭಾರತಕ್ಕೆ ಎರಡು ಪದಕ ಜಯಿಸುವ ಪ್ರಯತ್ನ ನಮ್ಮದು. ಈ ನಿಟ್ಟಿನಲ್ಲಿ ನನ್ನ ತವರು ಕೇರಳದ ಪಾಲಕ್ಕಾಡ್‌ನಲ್ಲಿ ನಿರಂತರ ಅಭ್ಯಾಸದಲ್ಲಿ ತೊಡಗಿಕೊಂಡಿದ್ದೇನೆ. ಇದೇ 25ರಂದು ಚೀನಾಗೆ ಪ್ರಯಾಣ ಬೆಳೆಸಲಿದ್ದು, 29ರಂದು ಲಾಂಗ್‌ಜಂಪ್‌ ಸ್ಪರ್ಧೆ ನಡೆಯಲಿದೆ’ ಎಂದು ಅವರು ವಿವರಿಸಿದರು. 2018ರ ಏಷ್ಯನ್‌ ಜೂನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚು, 2022ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಬೆಳ್ಳಿ, 2023ರ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಸಾಧನೆ ಮಾಡಿರುವ ಕೇರಳದ 24 ವರ್ಷದ ಅಥ್ಲೀಟ್‌ ಮುರಳಿ, ಲಾಂಗ್‌ಜಂಪ್‌ನಲ್ಲಿ 8.41 ಮೀಟರ್‌ ದೂರ ಜಿಗಿತದ ವೈಯಕ್ತಿಕ ದಾಖಲೆ ಹೊಂದಿದ್ದಾರೆ. ಉತ್ಪನ್ನ ಬಿಡುಗಡೆ: ಇದೇ ವೇಳೆ ಡ್ಯುರೊಫ್ಲೆಕ್ಸ್‌ನ ಹೊಸ ಉತ್ಪನ್ನ ‘ಎನರ್ಜೈಜ್‌’ ಮ್ಯಾಟ್ರೆಸ್‌ ಬಿಡುಗಡೆ ಮಾಡಲಾಯಿತು. ಡ್ಯುರೊಫ್ಲೆಕ್ಸ್‌ನ ಸಿಇಒ ಜೆ. ಮೋಹನರಾಜ್, ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನ ಸಿಇಒ ರಶ್ದಿ ವಾರ್ಲಿ, ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್‌ನ ಸಿಒಒ ದಿವ್ಯಾಂಶು ಸಿಂಗ್‌, ಕರ್ನಾಟಕದ ಅಥ್ಲೀಟ್‌ ಪ್ರಿಯಾ ಎಚ್. ಮೋಹನ್, ಬಾಕ್ಸರ್‌ ಕಲೈವಾಣಿ ಶ್ರೀನಿವಾಸನ್ ಇದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.