ವಿಶ್ವಕಪ್‌ ಶೂಟಿಂಗ್‌: ನಿಶ್ಚಲ್‌ಗೆ ಬೆಳ್ಳಿ ನವದೆಹಲಿ: ಭಾರತದ ಯುವ ಶೂಟರ್‌ ನಿಶ್ಚಲ್‌ ಅವರು ರಿಯೊ ಡಿ ಜನೈರೊದಲ್ಲಿ ಕೊನೆಗೊಂಡ ಐಎಸ್‌ಎಸ್‌ಎಫ್‌ ವಿಶ್ವಕಪ್‌ನ ಮಹಿಳೆಯರ 50 ಮೀ. ರೈಫಲ್‌ ತ್ರಿ ಪೊಸಿಷನ್‌ನಲ್ಲಿ ಬೆಳ್ಳಿ ಗೆದ್ದುಕೊಂಡರು. ಕೂಟದ ಅಂತಿಮ ದಿನವಾದ ಸೋಮವಾರ ನಡೆದ ಸ್ಪರ್ಧೆಯ ಫೈನಲ್‌ನಲ್ಲಿ ಅವರು 458.0 ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನ ಪಡೆದರು. ನಾರ್ವೆಯ ಜಾನೆಟ್‌ ಹೆಗ್‌ ಡುಯೆಸ್ಟ್ (461.5) ಚಿನ್ನ ಗೆದ್ದುಕೊಂಡರು. ಹರಿಯಾಣದ ಶೂಟರ್‌ಗೆ ಸೀನಿಯರ್‌ ವಿಭಾಗದಲ್ಲಿ ವಿಶ್ವಕಪ್‌ನಲ್ಲಿ ದೊರೆತ ಮೊದಲ ಪದಕ ಇದು. ‘ಸೀನಿಯರ್‌ ವಿಭಾಗದಲ್ಲಿ ಇದು ನನ್ನ ಮೊದಲ ವಿಶ್ವಕಪ್‌ ಫೈನಲ್‌ ಆಗಿತ್ತು. ಪದಕ ಗೆದ್ದಿರುವುದು ಸಂತಸ ಉಂಟುಮಾಡಿದೆ’ ಎಂದು ನಿಶ್ಚಲ್‌ ಪ್ರತಿಕ್ರಿಯಿಸಿದರು. ರಾಷ್ಟ್ರೀಯ ದಾಖಲೆ: ನಿಶ್ಚಲ್‌ ಅವರು ಅರ್ಹತಾ ಸುತ್ತಿನಲ್ಲಿ 592 ಪಾಯಿಂಟ್ಸ್‌ ಕಲೆಹಾಕಿ ರಾಷ್ಟ್ರೀಯ ದಾಖಲೆ ತಮ್ಮದಾಗಿಸಿಕೊಂಡಿದ್ದರು. ಅಂಜುಮ್‌ (591) ಕಳೆದ ವರ್ಷ ಕೈರೊದಲ್ಲಿ ನಡೆದಿದ್ದ ಪ್ರೆಸಿಡೆಂಟ್ಸ್‌ ಕಪ್‌ನಲ್ಲಿ ಮಾಡಿದ್ದ ದಾಖಲೆಯನ್ನು ಮುರಿದರು. ವಿಶ್ವಕಪ್‌ನಲ್ಲಿ ಕಣದಲ್ಲಿದ್ದ ಅಂಜುಮ್ 586 ಪಾಯಿಂಟ್ಸ್‌ಗಳೊಂದಿಗೆ 10ನೇ ಸ್ಥಾನ ಪಡೆದು, ಫೈನಲ್‌ ಪ್ರವೇಶಿಸಲು ವಿಫಲರಾದರು. ಅಂತಿಮ ದಿನ ಕಣದಲ್ಲಿದ್ದ ಭಾರತದ ಮತ್ತೊಬ್ಬ ಶೂಟರ್‌ ಗುರುಪ್ರೀತ್‌ ಸಿಂಗ್, ಪುರುಷರ 25 ಮೀ. ರ‍್ಯಾಪಿಡ್‌ ಫೈರ್‌ ಪಿಸ್ತೂಲ್‌ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಲು ವಿಫಲರಾದರು. ಅವರು 15ನೇ ಸ್ಥಾನ ಗಳಿಸಿದರು. 16 ಶೂಟರ್‌ಗಳನ್ನು ಒಳಗೊಂಡಿದ್ದ ಭಾರತ ತಂಡವು ಈ ಕೂಟದಲ್ಲಿ ಎರಡು ಪದಕಗಳೊಂದಿಗೆ ತನ್ನ ಆಭಿಯಾನ ಕೊನೆಗೊಳಿಸಿದೆ. ಇಳವೆನಿಲ್‌ ವಾಳರಿವನ್‌ ಅವರು ಮಹಿಳೆಯರ 10 ಮೀ. ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.