ಹಾಕಿ: ಪದಕ ಜಯದ ವಿಶ್ವಾಸದಲ್ಲಿ ಹರ್ಮನ್‌ ಬಳಗ ಬೆಂಗಳೂರು: ಏಷ್ಯನ್ ಕ್ರೀಡಾಕೂಟದಲ್ಲಿ ಆಡಲಿರುವ ಭಾರತ ಪುರುಷರ ಹಾಕಿ ತಂಡವು ಮಂಗಳವಾರ ಬೆಂಗಳೂರಿನಿಂದ ಚೀನಾದ ಹಾಂಗ್‌ಝೌನತ್ತ ಪ್ರಯಾಣ ಬೆಳೆಸಿತು. ಭಾರತ‌ವು ಸೆ.24ರಂದು ಉಜ್ಬೇಕಿಸ್ತಾನ ವಿರುದ್ಧ ಮೊದಲ ಪಂದ್ಯ ಆಡಲಿದೆ. ಭಾರತ, ಪಾಕಿಸ್ತಾನ, ಜಪಾನ್, ಬಾಂಗ್ಲಾದೇಶ, ಸಿಂಗಪುರ ಮತ್ತು ಉಜ್ಬೇಕಿಸ್ತಾನ ತಂಡಗಳು ‘ಎ’ ಗುಂಪಿನಲ್ಲಿವೆ. ಕೊರಿಯಾ, ಮಲೇಷ್ಯಾ, ಚೀನಾ, ಒಮನ್, ಥಾಯ್ಲೆಂಡ್‌ ಮತ್ತು ಇಂಡೋನೇಷ್ಯಾ ತಂಡಗಳು ‘ಬಿ’ ಗುಂಪಿನಲ್ಲಿವೆ. ಗುಂಪುಗಳಲ್ಲಿ ಅಗ್ರಸ್ಥಾನ ಪಡೆಯುವ ಎರಡು ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ಭಾರತ ತಂಡವು ಸೆ.26, 28 ಮತ್ತು 30ರಂದು ಕ್ರಮವಾಗಿ ಸಿಂಗಪುರ, ಜಪಾನ್ ಮತ್ತು ಪಾಕಿಸ್ತಾನವನ್ನು ಎದುರಿಸಲಿದೆ. ಅ.2ರಂದು ಬಾಂಗ್ಲಾದೇಶ ವಿರುದ್ಧ ಗುಂಪು ಹಂತದ ಕೊನೆಯ ಪಂದ್ಯವನ್ನು ಆಡಲಿದೆ. ಹರ್ಮನ್‌ಪ್ರೀತ್ ಸಿಂಗ್ ಭಾರತ ತಂಡವನ್ನು ಮುನ್ನಡೆಸಲಿದ್ದು, ಹಾರ್ದಿಕ್ ಸಿಂಗ್‌ ಉಪನಾಯಕನಾಗಿದ್ದಾರೆ. ‘ಏಷ್ಯನ್ ಗೇಮ್ಸ್‌ಗಾಗಿ ಕಟ್ಟುನಿಟ್ಟಾಗಿ ತಯಾರಿ ನಡೆಸಿದ್ದೇವೆ. ಕಳೆದ ತಿಂಗಳು ಚೆನ್ನೈನಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲೂ ಉತ್ತಮ ಪ್ರದರ್ಶನ ನೀಡಿದ್ದೇವೆ. ಅದೇ ಆಟವನ್ನು ಅಲ್ಲೂ ಪ್ರದರ್ಶಿಸುವ ವಿಶ್ವಾಸ ಹೊಂದಿದ್ದೇವೆ’ ಎಂದು ಹರ್ಮನ್‌ಪ್ರೀತ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ‘ಶಿಬಿರದಲ್ಲಿ ಪ್ರತಿಯೊಬ್ಬರೂ ಒಂದೇ ಗುರಿಯತ್ತ ಚಿತ್ತ ಹರಿಸಿ ಕಠಿಣ ಅಭ್ಯಾಸ ನಡೆಸಿದ್ದಾರೆ. ನಮ್ಮ ಗುಂಪಿನಲ್ಲಿ ಕಠಿಣ ಸ್ಪರ್ಧೆಯನ್ನು ಎದುರು ನೋಡುತ್ತಿದ್ದೇವೆ. ಪದಕದೊಂದಿಗೆ ಚೀನಾದಿಂದ ಹಿಂತಿರುಗುವ ಗುರಿ ನಮ್ಮದು’ ಎಂದು ಹಾರ್ದಿಕ್ ಸಿಂಗ್‌ ತಿಳಿಸಿದ್ದಾರೆ. ಭಾರತ ತಂಡ: ಗೋಲ್‌ಕೀಪರ್‌: ಪಿ.ಆರ್. ಶ್ರೀಜೇಶ್, ಕ್ರಿಷನ್ ಪಾಠಕ್‌ ಡಿಫೆಂಡರ್‌: ವರುಣ್ ಕುಮಾರ್, ಅಮಿತ್ ರೋಹಿದಾಸ್, ಜರ್ಮನ್‌ಪ್ರೀತ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್ ಮತ್ತು ಸಂಜಯ್ ಮಿಡ್‌ಫೀಲ್ಡರ್‌: ನೀಲಕಂಠ ಶರ್ಮಾ, ಹಾರ್ದಿಕ್ ಸಿಂಗ್, ಮನ್‌ಪ್ರೀತ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಸುಮಿತ್, ಶಂಶೇರ್ ಸಿಂಗ್, ಫಾರ್ವರ್ಡ್‌: ಅಭಿಷೇಕ್, ಗುರ್ಜಂತ್ ಸಿಂಗ್, ಮನ್‌ದೀಪ್ ಸಿಂಗ್, ಸುಖಜೀತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.