ಏಷ್ಯನ್‌ ಗೇಮ್ಸ್‌ನ ಉದ್ಘಾಟನಾ ಸಮಾರಂಭ: ಹರ್ಮನ್‌, ಲವ್ಲಿನಾ ಧ್ವಜಧಾರಿ ನವದೆಹಲಿ: ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಮತ್ತು ಒಲಿಂಪಿಕ್‌ ಪದಕ ವಿಜೇತೆ ಮಹಿಳಾ ಬಾಕ್ಸರ್‌ ಲವ್ಲಿನಾ ಬೊರ್ಗೊಹೈನ್‌ ಅವರು ಏಷ್ಯನ್‌ ಗೇಮ್ಸ್‌ನ ಉದ್ಘಾಟನಾ ಸಮಾರಂಭದ ಪಥಸಂಚಲನದಲ್ಲಿ ತ್ರಿವರ್ಣ ಧ್ವಜ ಹಿಡಿದು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಧ್ವಜಧಾರಿಗಳಾಗುವ ಗೌರವವನ್ನು ಇಬ್ಬರಿಗೆ ನೀಡುವ ನಿರ್ಧಾರವನ್ನು ಭಾರತ ಒಲಿಂಪಿಕ್‌ ಸಂಸ್ಥೆ (ಐಒಎ) ಬುಧವಾರ ತೆಗೆದುಕೊಂಡಿತು. ಏಷ್ಯನ್‌ ಗೇಮ್ಸ್‌ನಲ್ಲಿ ಈ ಬಾರಿ ಭಾರತದ 655 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ‘ನಾವು ಸಾಕಷ್ಟು ಚರ್ಚೆಯ ಬಳಿಕ ಈ ನಿರ್ಧರಕ್ಕೆ ಬಂದಿದ್ದೇವೆ. ಪಥಸಂಚನಲದ ವೇಳೆ ಧ್ವಜ ಹಿಡಿದು ಭಾರತದ ಕ್ರೀಡಾಪಟುಗಳನ್ನು ಮುನ್ನಡೆಸುವ ಅವಕಾಶವನ್ನು ಇಬ್ಬರಿಗೆ ನೀಡಿದ್ದೇವೆ’ ಎಂದು ಭಾರತ ತಂಡದ ಚೆಫ್‌ ಡಿ ಮಿಷನ್ ಭೂಪೇಂದರ್‌ ಸಿಂಗ್‌ ಬಾಜ್ವಾ ತಿಳಿಸಿದ್ಧಾರೆ. 2018ರಲ್ಲಿ ಜಕಾರ್ತಾದಲ್ಲಿ ನಡೆದಿದ್ದ ಕೂಟದಲ್ಲಿ ಜಾವೆಲಿನ್‌ ಥ್ರೋ ಸ್ಪರ್ಧಿ ನೀರಜ್‌ ಚೋಪ್ರಾ ಅವರು ಧ್ವಜಧಾರಿಯಾಗಿದ್ದರು. ಲವ್ಲಿನಾ ಅವರು ಟೋಕಿಯೊ ಒಲಿಂಪಿಕ್ಸ್‌ನ ಮಹಿಳೆಯರ 69 ಕೆ.ಜಿ. ವಿಭಾಗದಲ್ಲಿ ಕಂಚು ಗೆದ್ದಿದ್ದರು. ಈ ವರ್ಷ ನವದೆಹಲಿಯಲ್ಲಿ ನಡೆದಿದ್ದ ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ 75 ಕೆ.ಜಿ. ವಿಭಾಗದಲ್ಲಿ ಚಿನ್ನ ಜಯಿಸಿದ್ದರು. ವಿಶ್ವದ ಅತ್ಯುತ್ತಮ ಡ್ರ್ಯಾಗ್‌ ಫ್ಲಿಕ್ಕರ್‌ಗಳಲ್ಲಿ ಒಬ್ಬರಾಗಿರುವ ಹರ್ಮನ್‌ಪ್ರೀತ್‌ ಅವರು ಈ ಕೂಟದಲ್ಲಿ ಭಾರತ ಹಾಕಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ತಂಡದಲ್ಲಿ ಅವರೂ ಇದ್ದರು. ಹಾಂಗ್‌ಝೌ ಕೂಟದಲ್ಲಿ ಚಿನ್ನ ಗೆದ್ದು, 2024ರ ಟೋಕಿಯೊ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಗಿಟ್ಟಿಸುವ ಗುರಿಯನ್ನು ಭಾರತ ತಂಡ ಹೊಂದಿದೆ. ವಾಲಿಬಾಲ್‌: ಕೊರಿಯಾಗೆ ಆಘಾತ ನೀಡಿದ ಭಾರತ ಹಾಂಗ್‌ಝೌ ಚೀನಾ (ಪಿಟಿಐ): ಭಾರತ ತಂಡದವರು ಏಷ್ಯನ್‌ ಗೇಮ್ಸ್‌ನ ವಾಲಿಬಾಲ್‌ ಟೂರ್ನಿಯ ಪಂದ್ಯದಲ್ಲಿ ಕಳೆದ ಬಾರಿಯ ಬೆಳ್ಳಿ ಪದಕ ವಿಜೇತ ದಕ್ಷಿಣ ಕೊರಿಯಾಕ್ಕೆ ಆಘಾತ ನೀಡಿ ನಾಕೌಟ್‌ ಹಂತ ಪ್ರವೇಶಿಸಿದರು. ಬುಧವಾರ ನಡೆದ ಪಂದ್ಯದಲ್ಲಿ ಚೇತೋಹಾರಿ ಪ್ರದರ್ಶನ ನೀಡಿದ ಭಾರತ 3–2 ರಿಂದ (25-27 29-27 25-22 20-25 17-15) ಪ್ರಬಲ ಎದುರಾಳಿಯನ್ನು ಮಣಿಸಿತು. ಎರಡು ಗಂಟೆ 38 ನಿಮಿಷ ನಡೆದ ಹಣಾಹಣಿಯಲ್ಲಿ ಅಮಿತ್‌ ಗುಲಿಯಾ ಮತ್ತು ಅಶ್ವಲ್‌ ರೈ ಅವರು ಭಾರತ ತಂಡದ ಪರ ಗಮನ ಸೆಳೆದರು. ಮಂಗಳವಾರ ನಡೆದಿದ್ದ ಮೊದಲ ಪಂದ್ಯದಲ್ಲಿ 3–0 ಯಿಂದ ಕಾಂಬೋಡಿಯ ತಂಡವನ್ನು ಮಣಿಸಿದ್ದ ಭಾರತ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು. ಭಾರತ ವಾಲಿಬಾಲ್‌ ತಂಡ ಏಷ್ಯನ್‌ ಗೇಮ್ಸ್‌ನಲ್ಲಿ ತನ್ನ ಕೊನೆಯ ಪದಕವನ್ನು 1986 ರಲ್ಲಿ (ಕಂಚು) ಜಯಿಸಿತ್ತು. ಕಳೆದ ಕೂಟದಲ್ಲಿ 12ನೇ ಸ್ಥಾನ ಗಳಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.