ಸತತ ವೈಫಲ್ಯ | ಸಿಂಧು ಮೇಲೆ ಹೆಚ್ಚಿನ ನಿರೀಕ್ಷೆ ಬೇಡ: ವಿಮಲ್‌ ಕುಮಾರ್ ನವದೆಹಲಿ : ಸತತ ವೈಫಲ್ಯದಿಂದ ಪಿ.ವಿ.ಸಿಂಧು ಅವರ ಆತ್ಮವಿಶ್ವಾಸ ಕುಗ್ಗಿದ್ದು, ಏಷ್ಯನ್‌ ಗೇಮ್ಸ್‌ನಲ್ಲಿ ಅವರಿಂದ ಹೆಚ್ಚಿನದ್ದನ್ನು ನಿರೀಕ್ಷಿಸುವಂತಿಲ್ಲ ಎಂದು ಭಾರತ ಬ್ಯಾಡ್ಮಿಂಟನ್‌ ತಂಡದ ಮಾಜಿ ಕೋಚ್‌ ವಿಮಲ್‌ ಕುಮಾರ್‌ ಹೇಳಿದ್ದಾರೆ. ಹಳೆಯ ಲಯಕ್ಕೆ ಮರಳುವ ಪ್ರಯ‌ತ್ನದಲ್ಲಿರುವ 28 ವರ್ಷದ ಸಿಂಧು, ಬೆಂಗಳೂರಿನ ಪ್ರಕಾಶ್‌ ಪಡುಕೋಣೆ ಬ್ಯಾಡ್ಮಿಂಟನ್‌ ಅಕಾಡೆಮಿಯಲ್ಲಿ (ಪಿಪಿಬಿಎ) ದಿಗ್ಗಜ ಆಟಗಾರ ಪ್ರಕಾಶ್‌ ಪಡುಕೋಣೆ ಅವರಿಂದ ಕಳೆದ ವಾರ ತರಬೇತಿ ಪಡೆದಿದ್ದರು. ‘ತರಬೇತಿ ಅವಧಿಯಲ್ಲಿ ಸಿಂಧು ಅವರ ಆಟವನ್ನು ಗಮನಿಸಿದ್ದೇವೆ. ಪ್ರಕಾಶ್‌, ಆತ್ಮವಿಶ್ವಾಸದ ಮಾತುಗಳ ಮೂಲಕ ಸಿಂಧು ಅವರಲ್ಲಿ ಪ್ರೇರಣೆ ತುಂಬಲು ಪ್ರಯತ್ನಿಸಿದ್ದಾರೆ. ಅವರ ಕೋಚ್‌ (ಮೊಹಮ್ಮದ್‌ ಹಫೀಜ್‌ ಹಾಶಿಂ) ಜತೆಯೂ ಮಾತನಾಡಿದ್ದೇವೆ’ ಎಂದು ಪಿಪಿಬಿಎ ನಿರ್ದೇಶಕ ವಿಮಲ್‌ ತಿಳಿಸಿದ್ಧಾರೆ. ‘ಸದ್ಯಕ್ಕೆ ಅವರಲ್ಲಿ ಆತ್ಮವಿಶ್ವಾಸದ ಕೊರತೆಯಿದೆ. ಆದ್ದರಿಂದ ಏಷ್ಯನ್‌ ಗೇಮ್ಸ್‌ನಲ್ಲಿ ಅವರಿಂದ ಪದಕ ನಿರೀಕ್ಷಿಸುವಂತಿಲ್ಲ’ ಎಂದಿದ್ದಾರೆ. ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತೆ ಹಾಗೂ 2019 ರ ವಿಶ್ವ ಚಾಂಪಿಯನ್‌ ಆಗಿರುವ ಸಿಂಧು, ಈ ಋತುವಿನ ಬಿಡಬ್ಲ್ಯುಎಫ್‌ ಟೂರ್‌ನ ಏಳು ಟೂರ್ನಿಗಳಲ್ಲಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದರು. ಕೆನಡಾ ಓಪನ್‌ನಲ್ಲಿ ಸೆಮಿಫೈನಲ್‌ವರೆಗೆ ತಲುಪಿದ್ದು, ಅಮೆರಿಕ ಓಪನ್‌ ಸೂಪರ್‌ 300 ಮತ್ತು ಆಸ್ಟ್ರೇಲಿಯನ್‌ ಓಪನ್ ಸೂಪರ್‌ 500 ಟೂರ್ನಿಗಳಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದು ಈ ಋತುವಿನಲ್ಲಿ ಇದುವರೆಗಿನ ಅವರ ಅತ್ಯುತ್ತಮ ಸಾಧನೆಯಾಗಿದೆ. ‘ಸಿಂಧು ಅವರಿಗೆ ಹಳೆಯ ಲಯ ಕಂಡುಕೊಳ್ಳಲು ಅಲ್ಪ ಸಮಯಾವಕಾಶ ನೀಡುವುದು ಮುಖ್ಯ. ಹಿಂದಿನ ಫಾರ್ಮ್‌ಗೆ ಮರಳಲು ಕೆಲವು ತಿಂಗಳು ಬೇಕಾಗಬಹುದು. ಅವರು ಆಟದಲ್ಲಿ ಒಂದಷ್ಟು ತಾಂತ್ರಿಕ ಬದಲಾವಣೆ ಮಾಡಿಕೊಳ್ಳಬೇಕಿದೆ’ ಎಂದು ಅಭಿಪ್ರಾಯಪಟ್ಟರು. ಏಷ್ಯನ್‌ ಕ್ರೀಡಾಕೂಟ ಚೀನಾದ ಹಾಂಗ್‌ಝೌನಲ್ಲಿ ಸೆ.23 ರಿಂದ ನಡೆಯಲಿದೆ. ಸಿಂಧು ಅವರು ಈ ಕ್ರೀಡಾಕೂಟಕ್ಕೆ ಸಜ್ಜಾಗಲು ಚೀನಾ ಓಪನ್‌ ಸೂಪರ್‌ 1000 ಮತ್ತು ಹಾಂಗ್‌ಕಾಂಗ್‌ ಓಪನ್‌ ಸೂಪರ್‌ 500 ಟೂರ್ನಿಯಿಂದ ಹಿಂದೆ ಸರಿದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.