ಐಒಎ, ಎಐಎಫ್‌ಎಫ್‌ ನಿಯಮಾವಳಿ: ಅ. 20ರಂದು ಅರ್ಜಿಗಳ ವಿಚಾರಣೆ ನವದೆಹಲಿ: ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಮತ್ತು ಅಖಿಲ ಭಾರತ ಫುಟ್‌ಬಾಲ್ ಸಂಸ್ಥೆ (ಎಐಎಫ್‌ಎಫ್‌)ಗಳ ನಿಯಮಾವಳಿಗಳನ್ನು ಅಂತಿಮಗೊಳಿಸುವುದಕ್ಕೆ ಸಂಬಂಧಿಸಿ ಸಲ್ಲಿಸಲಾಗಿರುವ ಅರ್ಜಿಗಳ ಅಂತಿಮ ವಿಚಾರಣೆಯನ್ನು ಅಕ್ಟೋಬರ್‌ 20ಕ್ಕೆ ನಿಗದಿಮಾಡಿರುವುದಾಗಿ ಸುಪ್ರೀಂ ಕೋರ್ಟ್‌ ಸೋಮವಾರ ತಿಳಿಸಿದೆ. ಈ ಎರಡೂ ಸಂಸ್ಥೆಗಳ ನಿಯಮಾವಳಿಗಳನ್ನು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಲ್‌.ನಾಗೇಶ್ವರ ರಾವ್ ಅವರು ರೂಪಿಸಿದ್ದಾರೆ. ಈ ಕರಡು ನಿಯಮಾವಳಿಗಳಿಗೆ ಸಂಬಂಧಪಟ್ಟಂತೆ ಎತ್ತಿರುವ ಆಕ್ಷೇಪಗಳಿಗೆ ಸಂಬಂಧಿಸಿ ಪ್ರತ್ಯೇಕ ಅರ್ಜಿಗಳ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾ. ಪಿ.ಎಸ್‌.ನರಸಿಂಹ ಅವರನ್ನೊಳಗೊಂಡ ಪೀಠವು ಅ. 20ರಂದು ಈ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿತು. ‘ಐಒಎ ನಿಯಮಾವಳಿಗೆ (ಸಂವಿಧಾನಕ್ಕೆ) ಸಂಬಂಧಿಸಿ ಎತ್ತಿರುವ ಆಕ್ಷೇಪಣೆಗಳನ್ನು ಪಟ್ಟಿ ಮಾಡಲಾಗಿದ್ದು, ಸಂಬಂಧಿತ ಅರ್ಜಿದಾರರಿಗೆ ಕಳುಹಿಸಲಾಗುವುದು ಎಂದು ಅಡಿಷನಲ್‌ ಸಾಲಿಸಿಟರ್‌ ಜನರಲ್ ಕೆ.ಎಂ.ನಟರಾಜ್ ಅವರು ತಿಳಿಸಿದ್ದಾರೆ ಎಂದು ಪೀಠವು ಹೇಳಿತು. ಎಐಎಫ್‌ಎಫ್‌ ನಿಯಮಾವಳಿಗೆ ಸಂಬಂಧಿಸಿ ನ್ಯಾ.ರಾವ್ ಅವರು ಸಲ್ಲಿಸಿರುವ ವರದಿಯ ಪ್ರತಿಯನ್ನು ಪಡೆಯಲು ಬಯಸುವ ಅರ್ಜಿದಾರರಿಗೆ ಅಮಿಕಸ್ ಕ್ಯೂರಿ ಆಗಿರುವ ಗೋಪಾಲ್ ಶಂಕರನಾರಾಯಣ ಅವರು ಪ್ರತಿಯನ್ನು ನೀಡುತ್ತಾರೆ ಎಂದು ಪೀಠವು ತಿಳಿಸಿತು. ಎಐಎಫ್‌ಎಫ್‌ ನಿಯಮಾವಳಿಗಳಿಗೆ ಸಂಬಂಧಿಸಿದ ಆಕ್ಷೇಪಣೆಗಳನ್ನು ಮೂರು ವಾರಗಳ ಒಳಗೆ ಸಲ್ಲಿಸಬೇಕು ಎಂದು ಕೋರ್ಟ್‌ ನಿರ್ದೇಶನ ನೀಡಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.