ಮಹಿಳಾ ಏಷ್ಯನ್ ಚಾಂಪಿಯನ್ಸ್‌ ಹಾಕಿ ಟ್ರೋಫಿ: ಭಾರತಕ್ಕೆ ಮೊದಲ ಎದುರಾಳಿ ಥಾಯ್ಲೆಂಡ್‌ ರಾಂಚಿ: ಭಾರತ ಮಹಿಳಾ ತಂಡವು, ಮುಂಬರು ಏಷ್ಯ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯ ಮೊದಲ ಪಂದ್ಯವನ್ನು ಥಾಯ್ಲೆಂಡ್‌ ವಿರುದ್ಧ ಇಲ್ಲಿ ಅಕ್ಟೋಬರ್ 27ರಂದು ಆಡಲಿದೆ. ಹಾಕಿ ಇಂಡಿಯಾ ಮಂಗಳವಾರ ಟೂರ್ನಿಯ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಮರಾಂಗ್ ಗೋಮ್ಕೆ ಜೈಪಾಲ್‌ ಸಿಂಗ್ ಆಸ್ಟ್ರೋ ಟರ್ಫ್ ಹಾಕಿ ಕ್ರೀಡಾಂಗಣದಲ್ಲಿ ನಡೆಯುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮಲೇಷಿಯಾ ಮತ್ತು ಜಪಾನ್ ಎದುರಾಗಲಿವೆ. ಆತಿಥೇಯ ಭಾರತ ಮೊದಲ ದಿನ ಮೂರನೇ ಪಂದ್ಯದಲ್ಲಿ ಥಾಯ್ಲೆಂಡ್ ತಂಡವನ್ನು ಎದುರಿಸಲಿದೆ. ಭಾರತ, ನವೆಂಬರ್ 2ರಂದು ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಕೊರಿಯಾ ತಂಡವನ್ನು ಎದುರಿಸಲಿದೆ. ಈ ಟೂರ್ನಿಯಲ್ಲಿ ಕೊರಿಯಾ, ಮಲೇಷ್ಯಾ, ಥಾಯ್ಲೆಂಡ್‌, ಜಪಾನ್‌, ಚೀನಾ ಮತ್ತು ಆತಿಥೇಯ ಭಾರತ ಪಾಲ್ಗೊಳ್ಳುತ್ತಿವೆ. ನವೆಂಬರ್‌ 5ರಂದು ಟೂರ್ನಿ ಮುಕ್ತಾಯಗೊಳ್ಳಲಿದೆ. ಬರ್ಮಿಂಗಮ್ ಕಾಮನ್‌ವೆಲ್ತ್ ಕ್ರೀಡೆಗಳಲ್ಲಿ ಕಂಚಿನ ಪದಕ ಮತ್ತು ಕಳೆದ ವರ್ಷ ಸ್ಪೇನ್‌ನಲ್ಲಿ ನಡೆದ ಎಫ್‌ಐಎಚ್‌ ಮಹಿಳಾ ನೇಷನ್ಸ್‌ ಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡ ಭಾರತ ಉತ್ತಮ ಲಯದಲ್ಲಿದೆ. ಭಾರತ 2016ರಲ್ಲಿ ಈ ಟೂರ್ನಿಯಲ್ಲಿ ಜಯಭೇರಿ ಮೊಳಗಿಸಿತ್ತು. ಎರಡು ವರ್ಷಗಳ ನಂತರ ರನ್ನರ್ ಅಪ್ ಆಗಿತ್ತು. ‘ಇನ್ನೊಂದು ಪ್ರಮುಖ ಏಷ್ಯನ್‌ ಟೂರ್ನಿಯ ಆತಿಥ್ಯ ವಹಿಸಿಕೊಳ್ಳಲು ನಮಗೆ ಹೆಮ್ಮೆಯೆನಿಸುತ್ತದೆ. ಜಗತ್ತಿನ ಕೆಲವು ಉನ್ನತ ತಂಡಗಳು ಟೂರ್ನಿಯಲ್ಲಿ ಭಾಗವಹಿಸುವುದರಿಂದ ಏಷ್ಯನ್ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯು ಅತ್ಯುತ್ತಮ ಪಂದ್ಯಗಳ ರಸದೌತಣ ಬಡಿಸಲಿವೆ’ ಎಂದು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್‌ ಟಿರ್ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗುಂಪು ಹಂತದಲ್ಲಿ ಮೊದಲ ಎರಡು ಸ್ಥಾನ ಪಡೆದ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ಹಾಲಿ ಚಾಂಪಿಯನ್ ಜಪಾನ್‌ಗೆ, ದಕ್ಷಿಣ ಕೊರಿಯಾದಿಂದ ಬಲವಾದ ಪ್ರತಿರೋಧ ಎದುರಾಗುವ ಸಾಧ್ಯತೆಯದೆ. ದಕ್ಷಿಣ ಕೊರಿಯಾ ಇದುವರೆಗಿನ ಆರು ಆವೃತ್ತಿಗಳಲ್ಲಿ ಮೂರು ಬಾರಿ (2010, 2011 ಮತ್ತು 2016) ಚಾಂಪಿಯನ್ ಆಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.