ಶೂಟಿಂಗ್‌: ಇಳವೆನಿಲ್‌ಗೆ ಚಿನ್ನ ರಿಯೊ ಡಿ ಜನೈರೊ: ಭಾರತದ ಇಳವೆನಿಲ್‌ ವಾಳರಿವನ್‌ ಅವರು ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌ನ ಮಹಿಳೆಯರ 10 ಮೀ. ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು. ಶನಿವಾರ ನಡೆದ ಫೈನಲ್‌ನಲ್ಲಿ ನಿಖರ ಗುರಿ ಸಾಧಿಸಿದ ಇಳವೆನಿಲ್ 252.2 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನ ಪಡೆದರು. ಫ್ರಾನ್ಸ್‌ನ 20 ವರ್ಷದ ಶೂಟರ್‌ ಒಸಿಯಾನ್ ಮುಲರ್‌ (251.9) ಬೆಳ್ಳಿ ಗೆದ್ದರೆ, ಚೀನಾದ ಜಾಂಗ್ ಜಿಯಾಲಿ ಕಂಚು ತಮ್ಮದಾಗಿಸಿಕೊಂಡರು. ಅರ್ಹತಾ ಸುತ್ತಿನಲ್ಲಿ 630.5 ಪಾಯಿಂಟ್ಸ್‌ ಕಲೆಹಾಕಿದ್ದ ಭಾರತದ ಶೂಟರ್‌, ಎಂಟನೇ ಹಾಗೂ ಅಂತಿಮ ಸ್ಪರ್ಧಿಯಾಗಿ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಅರ್ಹತಾ ಹಂತದಲ್ಲಿ ಮುಲರ್‌ (633.7) ಮೊದಲ ಸ್ಥಾನ ಗಳಿಸಿದ್ದರು. ಪುರುಷರ 10 ಮೀ. ಏರ್‌ ರೈಫಲ್ ವಿಭಾಗದಲ್ಲಿ ಕಣದಲ್ಲಿದ್ದ ಸಂದೀಪ್‌ ಸಿಂಗ್‌, ಅರ್ಹತಾ ಸುತ್ತಿನಲ್ಲಿ 628.2 ಪಾಯಿಂಟ್ಸ್‌ಗಳೊಂದಿಗೆ 14ನೇ ಸ್ಥಾನ ಪಡೆದರು. ಇಳವೆನಿಲ್‌ ಮತ್ತು ಸಂದೀಪ್‌ ಅವರು ಶುಕ್ರವಾರ ನಡೆದಿದ್ದ 10 ಮೀ. ಏರ್‌ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಐದನೇ ಸ್ಥಾನ ಪಡೆದುಕೊಂಡಿದ್ದರು. ಇಬ್ಬರೂ ಒಟ್ಟು 629.1 ಪಾಯಿಂಟ್ಸ್‌ ಕಲೆಹಾಕಿದ್ದರು. ಕೇವಲ 0.5 ಪಾಯಿಂಟ್ಸ್‌ಗಳಿಂದ ಕಂಚಿನ ಪದಕ ಗೆಲ್ಲುವ ಅವಕಾಶ ಕಳೆದುಕೊಂಡಿದ್ದರು. ಈ ಕೂಟದಲ್ಲಿ ಭಾರತದ 16 ಶೂಟರ್‌ಗಳು ಕಣದಲ್ಲಿದ್ದಾರೆ. ಎರಡು ಚಿನ್ನದೊಂದಿಗೆ ಇಟಲಿ ತಂಡ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಭಾರತವು ಅರ್ಮೇನಿಯಾ ಜತೆ ಜಂಟಿ ಮೂರನೇ ಸ್ಥಾನದಲ್ಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.