ಚೆಸ್‌: ವಿದಿತ್‌ಗೆ ಅನಿರೀಕ್ಷಿತ ಸೋಲು ಹಾಂಗ್‌ಝೌ (ಪಿಟಿಐ): ಭಾರತದ ಜಿಎಂ ವಿದಿತ್‌ ಎಸ್‌.ಗುಜರಾತಿ ಅವರು ಏಷ್ಯನ್ ಗೇಮ್ಸ್‌ ಚೆಸ್‌ ವೈಯಕ್ತಿಕ ವಿಭಾಗದ ಎರಡನೇ ಸುತ್ತಿನಲ್ಲಿ ಭಾನುವಾರ ಕಜಕಸ್ತಾನ ಐಎಂ ಕಾಝಿಬೆಕ್ ನೊಗೆರ್‌ಬೆಕ್ ಎದುರು ಅನಿರೀಕ್ಷಿತ ಸೋಲನುಭವಿಸಿದರು. ಈ ಟೂರ್ನಿಯಲ್ಲಿ ವಿದಿತ್ ಅವರು ಮೂರನೇ ಅತ್ಯಧಿಕ ರ್‍ಯಾಂಕಿಂಗ್ ಹೊಂದಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಭಾರತದ ಪ್ರಮುಖ ಆಟಗಾರ್ತಿಯರು– ಕೋನೇರು ಹಂಪಿ ಮತ್ತು ದ್ರೋಣವಲ್ಲಿ ಹಾರಿಕಾ ಅವರು ಮೊದಲ ಎರಡೂ ಸುತ್ತುಗಳಲ್ಲಿ ಜಯಗಳಿಸಿದರು. ಇವರ ಜೊತೆ ಇನ್ನೂ ಮೂವರು ಆಟಗಾರ್ತಿಯರು ತಲಾ ಎರಡು ಅಂಕ ಗಳಿಸಿದ್ದಾರೆ. ಮೊದಲ ಸುತ್ತಿನಲ್ಲಿ ಬಾಂಗ್ಲಾದೇಶದ ಐಎಂ ಮೊಹಮ್ಮದ್ ಫಹದ್ ರಹಮಾನ್ ಎದುರು ಜಯಗಳಿಸಿದ್ದ ಗುಜರಾತಿ ಅವರಿಗೆ ಎರಡನೇ ಸುತ್ತಿನ ಸೋಲು ಹಿನ್ನಡೆ ಉಂಟುಮಾಡಿತು. ಈ ಟೂರ್ನಿ ರ್‍ಯಾಪಿಡ್ ಮಾದರಿಯಲ್ಲಿ ನಡೆಯುತ್ತಿದೆ. ವೈಯಕ್ತಿಕ ವಿಭಾಗದಲ್ಲಿ ಸ್ಪರ್ಧಿಸಿರುವ ಭಾರತದ ಇನ್ನೊಬ್ಬ ಆಟಗಾರ ಅರ್ಜುನ್ ಇರಿಗೇಶಿ ಅವರು ಅವರು ಎರಡು ಸುತ್ತುಗಳ ನಂತರ ಒಂದೂವರೆ ಪಾಯಿಂಟ್ಸ್‌ ಸಂಗ್ರಹಿಸಿದ್ದಾರೆ. ಮೊದಲು ಫಿಲಿಪೀನ್ಸ್‌ನ ಪೌಲೊ ಬೆರ್ಸಮಿನ ಅವರನ್ನು ಸೋಲಿಸಿದ 20 ವರ್ಷದ ಅರ್ಜುನ್ ಎರಡನೇ ಸುತ್ತಿನಲ್ಲಿ ವಿಯೆಟ್ನಾಮಿನ ಲಿ ತುವಾನ್ ಮಿನ್ ಜೊತೆ ಪಾಯಿಂಟ್‌ ಹಂಚಿಕೊಳ್ಳಬೇಕಾಯಿತು. ಪ್ರಮುಖ ಆಟಗಾರ ಉಜ್ಬೇಕಿಸ್ತಾನ ನಾಡಿರ್ಬೆಕ್ ಅಬ್ದುಸತ್ತಾರೊವ್ ಎರಡು ಅಂಕ ಸಂಗ್ರಹಿಸಿದ್ದರೆ, ಚೀನಾದ ವೀ ಯಿ ಅವರು ಒಂದೂವರೆ ಪಾಯಿಂಟ್ಸ್‌ ಹೊಂದಿದ್ದಾರೆ. ವೈಯಕ್ತಿಕ ವಿಭಾಗದ ಸ್ಪರ್ಧೆಗಳ ನಂತರ ಟೀಮ್ ವಿಭಾಗದ ಸ್ಪರ್ಧೆಗಳು ನಡೆಯಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.