| ಟ್ರ್ಯಾಕ್‌ನಲ್ಲಿ ರೆಪೆಷಾಜ್‌; ಓಟಕ್ಕೆ ಹೊಸ ಹೊಳಪು ಮಂಗಳೂರು: ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಈ ಬಾರಿಯ ಒಲಿಂಪಿಕ್ಸ್‌ನ 200ರಿಂದ 1500 ಮೀಟರ್ಸ್ ವರೆಗಿನ ಓಟದ ಸ್ಪರ್ಧೆಯಲ್ಲಿ ರೆಪೆಷಾಜ್‌ ನಿಯಮ ಜಾರಿಗೆ ಬರಲಿದೆ. ಹೀಟ್ಸ್‌ನಲ್ಲಿ ಹಿಂದೆ ಉಳಿದ ಅಥ್ಲೀಟ್‌ಗಳಿಗೆ ಸಾಮರ್ಥ್ಯವನ್ನು ಮತ್ತೊಮ್ಮೆ ಒರೆಗೆ ಹಚ್ಚಲು ಇದು ನೆರವಾಗಲಿದೆ. ಆಗಸ್ಟ್ ಒಂದರಿಂದ 11ರ ವರೆಗೆ ಪ್ಯಾರಿಸ್‌ನಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳು ನಡೆಯಲಿದ್ದು ರೆಪೆಷಾಜ್‌ ಇರುವ ಮೊದಲ ಸ್ಪರ್ಧೆಗೆ ಸೇಂಟ್ ಡೆನಿಸ್‌ನಲ್ಲಿರುವ ಸ್ಟೇಡ್ ಡಿ ಫ್ರಾನ್ಸ್‌ ಕ್ರೀಡಾಂಗಣ ಆ.3ರಂದು ವೇದಿಕೆಯಾಗಲಿದೆ. ಕುಸ್ತಿ, ಜೂಡೊ, ಟೇಕ್ವಾಂಡೊ, ರೋಯಿಂಗ್ ಮುಂತಾದ ಕ್ರೀಡೆಗಳಲ್ಲಿ ಸದ್ಯ ರೆಪೆಷಾಜ್‌ ನಿಯಮ ಬಳಸಲಾಗುತ್ತದೆ. ನಾಕೌಟ್‌ ಹಂತದ ಆರಂಭಿಕ ಸ್ಪರ್ಧೆಗಳಲ್ಲಿ ಸೋತವರಿಗೆ ಮತ್ತೊಂದು ಅವಕಾಶ ಸಿಗುವಂತೆ ಮಾಡುವುದು ಇದರ ಉದ್ದೇಶ. ಕುಸ್ತಿ, ಟೇಕ್ವಾಂಡೊ, ಜೂಡೊ ಮುಂತಾದ ಕ್ರೀಡೆಗಳಲ್ಲಿ ಪ್ರಬಲ ಎದುರಾಳಿ ಅಂದರೆ, ಫೈನಲ್‌ ಪ್ರವೇಶಿಸಿದವರ ವಿರುದ್ಧ ಸೋತವರಿಗೂ ಕಂಚಿನ ಪದಕಕ್ಕಾಗಿ ಸೆಣಸುವ ಅವಕಾಶವಿದೆ. ಹೀಗಾಗಿ ಈ ಕ್ರೀಡೆಗಳಲ್ಲಿ ಎರಡು ಕಂಚು ಸೇರಿದಂತೆ ನಾಲ್ಕು ಪದಕಗಳನ್ನು ನೀಡಲಾಗುತ್ತದೆ. ಅಥ್ಲೆಟಿಕ್ಸ್‌ನ ವೈಯಕ್ತಿಕ ವಿಭಾಗಗಳ ಹೀಟ್ಸ್‌ನಲ್ಲಿ ಹಿಂದೆ ಉಳಿದವರ ನಡುವೆ ಮತ್ತೊಂದು ಹೀಟ್ಸ್‌ (ರೆಪೆಷಾಜ್‌ ಹೀಟ್ಸ್‌) ನಡೆಸಿ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಅನುವು ಮಾಡಿಕೊಡುವುದಕ್ಕಾಗಿ ಅಥ್ಲೆಟಿಕ್ಸ್‌ನ ಜಾಗತಿಕ ಆಡಳಿತ ಸಂಸ್ಥೆ ‘ವರ್ಲ್ಡ್‌ ಅಥ್ಲೆಟಿಕ್ಸ್‌’ 2022ರಲ್ಲಿ ನಿರ್ಣಯ ಕೈಗೊಂಡಿತ್ತು. ಟ್ರ್ಯಾಕ್‌ ಸ್ಪರ್ಧೆಗಳಲ್ಲಿ ಸದ್ಯ ಹೀಟ್ಸ್‌, ಸೆಮಿಫೈನಲ್‌ ಮತ್ತು ಫೈನಲ್‌ ಸುತ್ತುಗಳು ಇವೆ. ಆದರೆ ಪ್ಯಾರಿಸ್‌ನಲ್ಲಿ ನಾಲ್ಕು ಸುತ್ತುಗಳ ಸ್ಪರ್ಧೆ ನಡೆಯಲಿದೆ. ಹೀಗಾಗಿ ಪ್ರತಿ ಅಥ್ಲೀಟ್‌ಗೆ ಕನಿಷ್ಠ ಎರಡು ಸುತ್ತುಗಳಲ್ಲಿ ಓಡುವ ಅವಕಾಶ ಲಭಿಸಲಿದೆ. 100 ಮೀಟರ್ಸ್, 3,000 ಮೀಟರ್ಸ್ ಮತ್ತು ಅದಕ್ಕೂ ಹೆಚ್ಚಿನ ಅಂತರದ ಓಟಕ್ಕೆ ಇದು ಅನ್ವಯವಾಗುವುದಿಲ್ಲ. ರೋಯಿಂಗ್ ನಿಯಮಕ್ಕೆ ಸಮಾನ ರೋಯಿಂಗ್‌ನ ರೆಪೆಷಾಜ್‌ ಹಂತ ಭಿನ್ನ. ಕುಸ್ತಿ, ಟೇಕ್ವಾಂಡೊ ಹಾಗೂ ಜೂಡೊದಲ್ಲಿ ಇರುವಂತೆ ಎರಡು ಕಂಚಿನ ಪದಕದ ಪದ್ಧತಿ ರೋಯಿಂಗ್‌ನಲ್ಲಿ ಇಲ್ಲ. ಕ್ವಾರ್ಟರ್ ಫೈನಲ್ ಅಥವಾ ಸೆಮಿಫೈನಲ್‌ಗೆ ಅರ್ಹತೆ ಗಳಿಸುವುದಕ್ಕಾಗಿ ಮಾತ್ರ ಇದರಲ್ಲಿ ರೆಪೆಷಾಜ್‌ ಹಂತ ಇರುತ್ತದೆ. ಇದೇ ಮಾದರಿ ಅಥ್ಲೆಟಿಕ್ಸ್‌ಗೂ ಅನ್ವಯ ಆಗಲಿದೆ. ಇಲ್ಲಿ, ರೆಪೆಷಾಜ್‌ ಹೀಟ್ಸ್ ಮೂಲಕ ಸೆಮಿಫೈನಲ್‌ ಪ್ರವೇಶಿಸಲು ಅವಕಾಶ ಲಭಿಸುತ್ತದೆ. ಸೆಮಿಫೈನಲ್‌ ಮತ್ತು ಫೈನಲ್‌ನಲ್ಲಿ ಈಗ ಇರುವ ನಿಯಮಗಳೇ ಬಳಕೆಯಾಗಲಿವೆ. ಪ್ಯಾರಿಸ್‌ ಟ್ರ್ಯಾಕ್‌ನಲ್ಲಿ ಭಾರತ ಒಟ್ಟು 12 ವೈಯಕ್ತಿಕ ಸ್ಪರ್ಧೆಗಳಲ್ಲಿ ಅಥ್ಲೀಟ್‌ಗಳನ್ನು ಕಣಕ್ಕೆ ಇಳಿಸಲಿದೆ. ಈ ಪೈಕಿ ಎರಡು ಸ್ಪರ್ಧೆಗಳಿಗೆ ಮಾತ್ರ ಇದು ಅನ್ವಯ ಆಗಲಿದೆ. ಮಹಿಳೆಯರ 400 ಮೀ. ಓಟದಲ್ಲಿ ಕಿರಣ್ ಪಹಲ್ ಮತ್ತು ಮಹಿಳೆಯರ 100 ಮೀ. ಹರ್ಡಲ್ಸ್‌ನಲ್ಲಿ ಜ್ಯೋತಿ ಯರ್ರಾಜಿ ಪಾಲ್ಗೊಳ್ಳುತ್ತಿದ್ದಾರೆ. ಒಲಿಂಪಿಕ್ಸ್‌ ಅಥ್ಲೆಟಿಕ್ಸ್‌ನಲ್ಲಿ ರಿಪೇಜ್ ಮಿಶ್ರ ರೇಸ್ ವಾಕಿಂಗ್ ರಿಲೆ ಈ ಬಾರಿ ಮಿಶ್ರ ರೇಸ್‌ ವಾಕಿಂಗ್ ರಿಲೆ ಕೂಡ ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡಲಿದೆ. ‘ಮ್ಯಾರಥಾನ್ ರೇಸ್ ವಾಕ್ ಮಿಕ್ಸಡ್‌ ರಿಲೆ’ ಎಂಬ ಹೆಸರಿನ ಈ ಸ್ಪರ್ಧೆ 42.195 ಕಿಮೀ ಅಂತರ ಹೊಂದಿರಲಿದ್ದು ಪುರುಷ ಮತ್ತು ಮಹಿಳಾ ಅಥ್ಲೀಟ್‌ಗಳು ತಲಾ ಎರಡು ‘ಲೆಗ್‌’ಗಳಲ್ಲಿ ನಡೆಯಲಿದ್ದಾರೆ. ವೈಯಕ್ತಿಕ ವೇಗ ನಡಿಗೆ ಸ್ಪರ್ಧೆ ನಡೆಯಲಿರುವ ಸೆಂಟ್ರಲ್ ಪ್ಯಾರಿಸ್‌ನ ಈಫೆಲ್ ಗೋಪುರದ ಪದತಳದಲ್ಲಿ ಮಿಶ್ರ ರೇಸ್ ವಾಕಿಂಗ್ ನಡೆಯಲಿದ್ದು ಆಗಸ್ಟ್ 7ರಂದು ಮುಂಜಾನೆ 7.30ಕ್ಕೆ ಇದನ್ನು ನಿಗದಿ ಮಾಡಲಾಗಿದೆ. ಭಾರತದ ಸೂರಜ್ ಪನ್ವರ್ ಹಾಗೂ ಪ್ರಿಯಾಂಕ ಗೋಸ್ವಾಮಿ ಸ್ಪರ್ಧಿಸಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.