: 1951ರಲ್ಲಿ ಚೊಚ್ಚಲ ಕ್ರೀಡಾಕೂಟ ಏಷ್ಯಾದ ಕ್ರೀಡಾಪಟುಗಳಿಗೆ ಸಾಮರ್ಥ್ಯ ತೋರಿಸಲು ವೇದಿಕೆಯಾಗಿರುವ ಏಷ್ಯನ್‌ ಕ್ರೀಡಾಕೂಟ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ. 1951 ರಲ್ಲಿ ನಡೆದಿದ್ದ ಮೊದಲ ಕೂಟಕ್ಕೆ ನವದೆಹಲಿ ಆತಿಥ್ಯ ವಹಿಸಿತ್ತು. ಅದಕ್ಕೂ ಮುನ್ನ ‘ಫಾರ್‌ ಈಸ್ಟರ್ನ್‌ ಚಾಂಪಿಯನ್‌ಷಿಪ್‌ ಗೇಮ್ಸ್‌’ ಎಂಬ ಹೆಸರಿನಲ್ಲಿ ಕ್ರೀಡಾಕೂಟ ಆಯೋಜನೆಯಾಗುತ್ತಿತ್ತು. 1913 ರಲ್ಲಿ ಆರಂಭವಾದ ಈ ಕ್ರೀಡಾಕೂಟ 1934ರಲ್ಲಿ ಮೊಟಕುಗೊಂಡಿತು. ಎರಡನೇ ವಿಶ್ವಯುದ್ಧದ ಬಳಿಕ ಏಷ್ಯಾದ ಹಲವು ದೇಶಗಳು ಸ್ವತಂತ್ರಗೊಂಡವು. ಫಾರ್‌ ಈಸ್ಟರ್ನ್‌ ಗೇಮ್ಸ್‌ ಮತ್ತೆ ಆರಂಭಿಸಲು ಚೀನಾ, ಫಿಲಿಪ್ಪೀನ್ಸ್‌ ಉತ್ಸುಕತೆ ತೋರಿದವು. 1948ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಈ ಬಗ್ಗೆ ಚರ್ಚೆಗಳು ನಡೆದವು. ಆದರೆ ಫಾರ್‌ ಈಸ್ಟರ್ನ್‌ ಗೇಮ್ಸ್‌ ಬದಲು, ಒಲಿಂಪಿಕ್ಸ್‌ನಂತೆಯೇ ಏಷ್ಯಾದ ದೇಶಗಳಿಗಾಗಿ ಕ್ರೀಡಾಕೂಟ ಆಯೋಜಿಸುವ ಚಿಂತನೆ ಈ ವೇಳೆ ಮೂಡಿತು. 1949 ರಲ್ಲಿ ಏಷ್ಯನ್‌ ಅಥ್ಲೆಟಿಕ್‌ ಫೆಡರೇಷನ್‌ ಅಸ್ವಿತ್ವಕ್ಕೆ ಬಂತು. 1951 ರಲ್ಲಿ ನವದೆಹಲಿಯಲ್ಲಿ ಮೊದಲ ಏಷ್ಯನ್‌ ಕ್ರೀಡಾಕೂಟ ನಡೆಸಲು ನಿರ್ಧರಿಸಲಾಯಿತು. ಮೊದಲ ಏಷ್ಯನ್‌ ಗೇಮ್ಸ್‌ನಲ್ಲಿ 11 ದೇಶಗಳ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ನಂತರದ ವರ್ಷಗಳಲ್ಲಿ ಪಾಲ್ಗೊಳ್ಳುವ ದೇಶಗಳ ಸಂಖ್ಯೆ ಹೆಚ್ಚಿತು. 2006ರ ಕೂಟದಿಂದ ಇಲ್ಲಿಯವರೆಗೆ 45 ದೇಶಗಳು ಈ ಕೂಟದಲ್ಲಿ ಭಾಗವಹಿಸುತ್ತಿವೆ. ಭಾರತವು ಎರಡು ಸಲ (1951 ಮತ್ತು 1982) ಆತಿಥ್ಯ ವಹಿಸಿದ್ದು, ಎರಡೂ ಕೂಟಗಳು ನವದೆಹಲಿಯಲ್ಲಿ ಆಯೋಜನೆಯಾಗಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.