|ಟೇಬಲ್‌ ಟೆನಿಸ್‌: ಭಾರತ ಪುರುಷ, ಮಹಿಳಾ ತಂಡಗಳು 16ರ ಸುತ್ತಿಗೆ ಹಾಂಗ್‌ಝೌ: ಭಾರತದ ಪುರುಷರ ಮತ್ತು ಮಹಿಳಾ ತಂಡಗಳು, ಏಷ್ಯನ್‌ ಕ್ರೀಡಾಕೂಟದ ಟೇಬಲ್‌ ಟೆನಿಸ್‌ ಸ್ಪರ್ಧೆಯ ಪ್ರಿಕ್ವಾರ್ಟರ್‌ಫೈನಲ್‌ಗೆ ಮುನ್ನಡೆದವು. ಶನಿವಾರ ನಡೆದ ‘ಎಫ್‌’ ಗುಂಪಿನ ಪಂದ್ಯದಲ್ಲಿ ಭಾರತ ಪುರುಷರ ತಂಡ 3–0 ಯಿಂದ ತಜಿಕಿಸ್ತಾನ ತಂಡವನ್ನು ಸೋಲಿಸಿತು. ಮೊದಲ ಪಂದ್ಯದಲ್ಲಿ ಸಿಂಗಪುರ ತಂಡವನ್ನು ಸೋಲಿಸಿದ್ದ ಭಾರತ ಮಹಿಳೆಯರು ‘ಎಫ್‌’ ಗುಂಪಿನ ಎರಡನೇ ಪಂದ್ಯದಲ್ಲಿ ನೇಪಾಳ ತಂಡವನ್ನೂ 3–0 ಯಿಂದ ಸುಲಭವಾಗಿ ಸೋಲಿಸಿದರು. ಈಗ 16ರ ಸುತ್ತಿನಲ್ಲಿ ಥಾಯ್ಲೆಂಡ್ ತಂಡವನ್ನು ಎದುರಿಸಲಿದ್ದಾರೆ. ‌ ದಿಯಾ ಚಿತಳೆ 11–1, 11–6, 11–8 ರಿಂದ ಸಿಕ್ಕಾ ಶ್ರೇಷ್ಠ ಅವರನ್ನು ಮಣಿಸಿದರೆ, ಐಹಿಕಾ ಮುಖರ್ಜಿ 11–3, 11–7, 11–2 ರಿಂದ ನಬಿತಾ ಶ್ರೇಷ್ಠ ಅವರನ್ನು ಸೋಲಿಸಿ ಮುನ್ನಡೆ ಹೆಚ್ಚಿಸಿದರು. ಮೂರನೇ ಸಿಂಗಲ್ಸ್‌ನಲ್ಲಿ ಸುತೀರ್ಥಾ ಮುಖರ್ಜಿ 11–1, 11–5, 11–2 ರಿಂದ ಇವಾನಾ ಥಾಪಾ ಅವರನ್ನು ನಿರಾಯಾಸವಾಗಿ ಮಣಿಸಿ ತಂಡದ ಗೆಲುವನ್ನು ಪೂರ್ಣಗೊಳಿಸಿದರು. ಮಣಿಕಾ ಬಾತ್ರಾ ಮತ್ತು ಶ್ರೀಜಾ ಅಕುಲಾ ಅವರು ವಿಶ್ರಾಂತಿ ಪಡೆದಿದ್ದರು. ಈ ಮೊದಲು ಯೆಮೆನ್ ಮತ್ತು ಸಿಂಗಪುರ ತಂಡಗಳನ್ನು ಸೋಲಿಸಿದ್ದ ಭಾರತ ತಂಡಕ್ಕೆ ತಜಿಕಿಸ್ತಾನದಿಂದ ಹೆಚ್ಚು ಹೋರಾಟ ಎದುರಾಗಲಿಲ್ಲ. ಅನುಭವಿಗಳಾದ ಜಿ.ಸತ್ಯನ್ ಮತ್ತು ಎ.ಶರತ್‌ ಕಮಲ್ ಅವರಿಗೆ ವಿಶ್ರಾಂತಿ ನೀಡಿದರೂ ಸಮಸ್ಯೆಯಾಗಲಿಲ್ಲ. ಮಾನವ್ ಠಕ್ಕರ್ 11–8, 11–5, 11–8 ರಿಂದ ಅಫ್ಜಲ್‌ಖಾನ್ ಮಹ್ಮದೊವ್ ಅವರನ್ನು ಮಣಿಸಿ ಉತ್ತಮ ಆರಂಭ ಒದಗಿಸಿದರು. ಮಾನುಷ್‌ ಷಾ ಎರಡನೇ ಸಿಂಗಲ್ಸ್‌ನಲ್ಲಿ 11–8, 11–5, 11–8 ರಿಂದ ಉಬೇದೊಲ್ಲಾ ಸುಲ್ತಾನೊವ್ ಅವರನ್ನು ಸೋಲಿಸಿ ತಂಡದ ಮುನ್ನಡೆ 2–0ಗೆ ಹೆಚ್ಚಿಸಿದರು. ಹರ್ಮಿತ್‌ ದೇಸಾಯಿ ಇನ್ನೂ ಸುಲಭವಾಗಿ 11–1, 11–3, 11–5ರಿಂದ ಇಬ್ರೊಖಿಮ್ ಇಸ್ಮಾಯಿಲ್‌ಝೊದಾ ಅವರನ್ನು ಮಣಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.