| ಶೂಟಿಂಗ್: ಫೈನಲ್ ಸುತ್ತಿಗೆ 'ರೈಲ್ವೆ ಟಿಕೆಟ್ ಕಲೆಕ್ಟರ್' ಸ್ವಪ್ನಿಲ್ ಶತೋಹು, ಫ್ರಾನ್ಸ್: ಭಾರತದ ಶೂಟರ್ ಸ್ವಪ್ನಿಲ್ ಕುಸಳೆ ಪುರುಷರ 50 ಮೀಟರ್ಸ್ ರೈಫಲ್ಸ್ ತ್ರಿ ಪೊಸಿಷನ್ಸ್‌ ವಿಭಾಗದ ಫೈನಲ್ ಪ್ರವೇಶಿಸಿದ್ದಾರೆ. ಶತೋಹು ಶೂಟಿಂಗ್ ರೇಂಜ್‌ನಲ್ಲಿ ಬುಧವಾರ ನಡೆದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಸ್ವಪ್ನಿಲ್ ಅವರು ಏಳನೇ ಸ್ಥಾನ ಗಳಿಸಿ ಫೈನಲ್ ಪ್ರವೇಶಿಸಿದರು. ಆದರೆ ಭಾರತದ ಇನ್ನೊಬ್ಬ ಶೂಟರ್ ಐಶ್ವರಿ ತೋಮರ್ ಅವರು 11ನೇ ಸ್ಥಾನ ಪಡೆದು ಹೊರಬಿದ್ದರು. ಸ್ವಪ್ನಿಲ್ ಅವರು ನೀಲಿಂಗ್‌ನಲ್ಲಿ 198 (99, 99), ಪ್ರೊನ್ ನಲ್ಲಿ 197 (98, 99) ಮತ್ತು ಸ್ಟ್ಯಾಂಡಿಂಗ್‌ನಲ್ಲಿ 195 (98, 97) ಅಂಕಗಳನ್ನು ಗಳಿಸಿದರು. ಅರ್ಹತಾ ಸುತ್ತಿನಲ್ಲಿ ಒಟ್ಟು 44 ಸ್ಪರ್ಧಿಗಳು ಇದ್ದರು. ಸ್ವಪ್ನಿಲ್ ಅವರು ಒಟ್ಟು 590 (38x) ಮತ್ತು ತೋಮರ್ 589 (33x) ಸ್ಕೋರ್ ಗಳಿಸಿದರು. ಚೀನಾ ಲಿಯು ಯುಕುನ್ (594) ಮೊದಲ, ನಾರ್ವೆಯ ಜಾನ್ ಹರ್ಮನ್ ಹೆಗ್ (593) ಎರಡನೇ ಹಾಗೂ ಉಕ್ರೇನ್‌ನ ಸರ್ಹಿಯಾ ಕುಲಿಶ್ (592) ಮೂರನೇ ಸ್ಥಾನ ಪಡೆದರು. ಆತಿಥೇಯ ಫ್ರಾನ್ಸ್‌ನ ಲೂಕಾಸ್ ಕ್ರೈಜ್ಸ್ (592), ಸರ್ಬಿಯಾದ ಲಝಾರ್ ಕೊವೆಸಿವಿಚ್ (592) ಮತ್ತು ಪೊಲೆಂಡ್‌ನ ಥಾಮಸ್ ಬಾರ್ಟ್ನಿಕ್ (590) ಅವರು ಕ್ರಮವಾಗಿ ನಾಲ್ಕು, ಐದು ಮತ್ತು ಆರನೇ ಸ್ಥಾನ ಪಡೆದರು. ಜೆಕ್ ಗಣರಾಜ್ಯದ ಜಿರಿ ಪ್ರಿವ್ರಾಸ್ಕಿ (590 –35X) ಎಂಟನೇ ಸ್ಥಾನ ಪಡೆದರು. ಸ್ವಪ್ನಿಲ್ ಅವರು ಕೊಲ್ಹಾಪುರದ ತೇಜಸ್ವಿನಿ ಸಾವಂತ್ ಅವರ ಬಳಿ ತರಬೇತಿ ಪಡೆದಿದ್ದಾರೆ. ಫೈನಲ್ ಸುತ್ತಿನ ಸ್ಪರ್ಧೆಯು ಗುರುವಾರ ನಡೆಯಲಿದೆ. ರೈಲ್ವೆ ಟಿಕೆಟ್ ಕಲೆಕ್ಟರ್ ಸ್ವಪ್ನಿಲ್ ಮಹಾರಾಷ್ಟ್ರದ ಕೊಲ್ಹಾಪುರದ ಕಂಬಳವಾಡಿ ಗ್ರಾಮದ ಸ್ವಪ್ನಿಲ್ ಕುಶಲೆ ಮತ್ತು ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರಿಬ್ಬರಲ್ಲಿಯೂ ಕೆಲವು ಸಾಮ್ಯತೆಗಳಿವೆ. ಸ್ವಪ್ನಿಲ್ ಅವರೂ ಧೋನಿಯಂತೆಯೇ ರೇಲ್ವೆ ಟಿಕೆಟ್ ನಿರೀಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟಿಗನಾಗುವ ಗುರಿಯೊಂದಿಗೆ ಧೋನಿ ನೌಕರಿ ತ್ಯಜಿಸಿದರು. ಧೋನಿಯವರ ಬಯೋಪಿಕ್ ಅನ್ನು ಪದೇ ಪದೇ ವೀಕ್ಷಿಸಿದ ಸ್ವಪ್ನಿಲ್ ಕೂಡ ಪೂರ್ಣಪ್ರಮಾಣದಲ್ಲಿ ಶೂಟಿಂಗ್‌ಗೆ ಸಮರ್ಪಿಸಿಕೊಂಡರು. ಧೋನಿಯವರಂತೆ ಶಾಂತ ಮತ್ತು ಸಮಚಿತ್ತ ಇರುವ ಸ್ವಪ್ನಿಲ್ ಒಲಿಂಪಿಕ್ಸ್‌ನಲ್ಲಿ ಈಗ ಪದಕ ಜಯದ ಹೊಸ್ತಿಲಿಗೆ ಬಂದು ನಿಂತಿದ್ದಾರೆ. ‘ನನ್ನ ಮತ್ತು ಧೋನಿಯವರ ಜೀವನದಲ್ಲಿ ಸಾಮ್ಯತೆಗಳು ಇವೆ. ನಾನು ಅವರನ್ನು ಬಹಳಷ್ಟು ಇಷ್ಟಪಡುತ್ತೇನೆ. ಅವರಂತೆಯೇ ನನ್ನದೂ ಶಾಂತಚಿತ್ತ. ಶೂಟಿಂಗ್‌ ಕ್ರೀಡಾಪಟುವಿಗೆ ಅತ್ಯಗತ್ಯವಾಗಿ ಇರುವ ಗುಣ ಇದಾಗಿದೆ. ನಾನು ಕೂಡ ರೈಲ್ವೆ ಟಿಕೆಟ್ ಕಲೆಕ್ಟರ್ ಆಗಿದ್ದೇನೆ’ ಎಂದು ಸ್ವಪ್ನಿಲ್ ಹೇಳಿದ್ದಾರೆ. ಅವರು 2015ರಿಂದ ಸೆಂಟ್ರಲ್ ರೈಲ್ವೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.