ಶೂಟಿಂಗ್: ತಪ್ಪಿದ ಭಾರತದ ಗುರಿ ಹಾಂಗ್‌ಝೌ: ಏಷ್ಯನ್‌ ಕ್ರೀಡಾಕೂಟದ ಶೂಟಿಂಗ್‌ನಲ್ಲಿ ಮೊದಲ ಎರಡು ದಿನ ಪದಕ ಗೆದ್ದಿದ್ದ ಭಾರತದ ಶೂಟರ್‌ಗಳು ಮಂಗಳವಾರ ನಿರಾಸೆ ಅನುಭವಿಸಿದರು. 10 ಮೀ. ಮಿಕ್ಸೆಡ್‌ ಏರ್ ರೈಫಲ್‌ ವಿಭಾಗದಲ್ಲಿ ಸ್ಪರ್ಧಿಸಿದ ದಿವ್ಯಾನ್ಶ್‌ ಪನ್ವಾರ್‌ ಮತ್ತು ರಮಿತಾ ಜಿಂದಾಲ್‌ ಅವರು ಕಂಚಿನ ಪದಕದೆಡೆಗೆ ಗುರಿ ಹಿಡಿಯುವ ಅವಕಾಶವನ್ನು ಅಲ್ಪದರಲ್ಲೇ ಕಳೆದುಕೊಂಡರು. ಮೂರನೇ ಸ್ಥಾನಕ್ಕಾಗಿ ನಡೆದ ಪೈಪೋಟಿಯಲ್ಲಿ ಭಾರತದ ಜೋಡಿ ದಕ್ಷಿಣ ಕೊರಿಯಾದ ಶೂಟರ್‌ಗಳ ಕೈಯಲ್ಲಿ ಪರಾಭವಗೊಂಡಿತು. ಪಾರ್ಕ್‌ ಹಾಜುನ್‌– ಲೀ ಯುನ್‌ಸಿಯೊ ಜೋಡಿ 20–18 ರಿಂದ ಗೆದ್ದಿತು. 20 ವರ್ಷದ ದಿವ್ಯಾನ್ಶ್‌ ಮತ್ತು 19 ವರ್ಷದ ರಮಿತಾ ಅವರು ಈ ಸ್ಪರ್ಧೆಯಲ್ಲಿ ಪದಕ ಗೆಲ್ಲುವ ನೆಚ್ಚಿನ ಶೂಟರ್‌ಗಳು ಎನಿಸಿದ್ದರು. ಆದರೆ ಅರ್ಹತಾ ಸುತ್ತಿನಲ್ಲಿ ನಿಖರ ಪ್ರದರ್ಶನ ನೀಡುವಲ್ಲಿ ಎಡವಿ ಆರನೇ ಹಾಗೂ ಕೊನೆಯ ಸ್ಥಾನ ಪಡೆದು ಫೈನಲ್‌ ಪ್ರವೇಶಿಸಿದರು. ಅರ್ಹತಾ ಹಂತದಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆದ ತಂಡಗಳು ಚಿನ್ನದ ಪದಕಕ್ಕಾಗಿ ಪೈಪೋಟಿ ನಡೆಸುತ್ತವೆ. ಎರಡು ಕಂಚಿನ ಪದಕಗಳಿಗೆ ಇತರ ನಾಲ್ಕು ತಂಡಗಳು ಹಣಾಹಣಿ ನಡೆಸುತ್ತವೆ. ಇನ್ನೊಂದು ಕಂಚಿನ ಪದಕವನ್ನು ಕಜಕಸ್ತಾನ ಗೆದ್ದುಕೊಂಡಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.