16ರ ಸುತ್ತಿಗೆ ಮಣಿಕಾ, ಶರತ್, ಸತ್ಯನ್ ಹಾಂಗ್‌ಝೌ : ಭಾರತದ ತಾರೆಗಳಾದ ಮಣಿಕಾ ಬಾತ್ರಾ, ಶರತ್ ಕಮಲ್ ಮತ್ತು ಜಿ.ಸತ್ಯನ್ ಅವರು ತಮ್ಮ ಎದುರಾಳಿಗಳ ವಿರುದ್ಧ ಅರ್ಹ ರೀತಿಯ ಜಯಪಡೆದು, ಏಷ್ಯನ್ ಗೇಮ್ಸ್‌ ಟೇಬಲ್ ಟೆನಿಸ್‌ ಸ್ಪರ್ಧೆಯ ಸಿಂಗಲ್ಸ್‌ ಪ್ರಿಕ್ವಾರ್ಟರ್‌ಫೈನಲ್ ತಲುಪಿದರು. 2018ರ ಕ್ರೀಡೆಗಳಲ್ಲಿ ಕಂಚಿನ ಪದಕ ಗಳಿಸಿದ್ದ ಅಚಿಂತ ಶರತ್ ಕಮಲ್ 11–9, 11–2, 11–7, 11–7 ರಿಂದ ಮಾಲ್ಡೀವ್ಸ್‌ನ ಮೊಹಮ್ಮದ್ ಶಫಾನ್ ಇಸ್ಮಾಯಿಲ್ ಅವರನ್ನು ಸೋಲಿಸಲು ಕಷ್ಟಪಡಲಿಲ್ಲ. ಕಳೆದ ಕ್ರೀಡೆಗಳ ತಂಡ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದ ಸತ್ಯನ್ ಕೂಡ 11–5, 11–6, 11–9, 11–2 ರಿಂದ ಸೌದಿ ಅರೇಬಿಯಾದ ತುರ್ಕಿ ಲಫಿ ಅಲ್‌ಮುತೈರಿ ಅವರನ್ನು ಹಿಮ್ಮೆಟ್ಟಿಸಿದರು. ಜಕಾರ್ತಾ ಕ್ರೀಡೆಗಳ ಮಿಕ್ಸೆಡ್ ಡಬಲ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಮಣಿಕಾ ಅವರಿಗೂ ಮಹಿಳೆಯರ ಸಿಂಗಲ್ಸ್‌ನಲ್ಲಿ ಸವಾಲು ಎದುರಾಗಲಿಲ್ಲ. ಭಾರತದ ಆಟಗಾರ್ತಿ 4–0 ಯಿಂದ (11–5, 11–4, 11–3, 11–2) ನೇಪಾಳದ ನಬಿತಾ ಶ್ರೇಷ್ಠ ಅವರನ್ನು ಕೇವಲ 20 ನಿಮಿಷಗಳಲ್ಲಿ ಸೋಲಿಸಿದರು. ಅವರ ಮುಂದಿನ ಎದುರಾಳಿ ಥಾಯ್ಲೆಂಡ್‌ನ ಸುತಾಸಿನಿ ಸವೆಟ್ಟಬುತ್. ಆದರೆ ಶ್ರೀಜಾ ಅಕುಲಾ ಅವರು ಉತ್ತರ ಕೊರಿಯಾದ ಸೊಂಗ್‌ಯಾಂಗ್ ಪ್ಯಾನ್ ಎದುರು 0–4 ಮುಖಭಂಗ ಅನುಭವಿಸಿದರು. ಸೊಂಗ್‌ಯಾಂಗ್ 11–6, 11–4, 15–13, 11–9 ರಿಂದ ಜಯಗಳಿಸಿದರು. ಡಬಲ್ಸ್‌ನಲ್ಲೂ ಮುನ್ನಡೆ: ವನಿತೆಯರ ಡಬಲ್ಸ್‌ನಲ್ಲಿ ಶ್ರೀಜಾ – ದಿವ್ಯಾ ಚಿತಳೆ 3–0 ಯಿಂದ (11–8, 15–13, 11–6) ವಿಯೆಟ್ನಾಮಿನ ಆಟಗಾರ್ತಿಯರನ್ನು ಸೋಲಿಸಿದರೆ, ಸುತೀರ್ಥ ಮುಖರ್ಜಿ– ಐಹಿಕಾ ಮುಖರ್ಜಿ 3–0 ಯಿಂದ (11–7, 11–4, 11–7) ಕಜಕಸ್ತಾನದ ಆಟಗಾರ್ತಿಯನ್ನು (ಅನಸ್ತಾಸಿಯಾ ಲಾವ್ರೊವಾ– ಝುವಾರೆಶ್ ಅಕಶೇವಾ) ಹಿಮ್ಮೆಟ್ಟಿಸಿದರು. ಪುರುಷರ ಡಬಲ್ಸ್‌ನಲ್ಲಿ ಮಾನವ್ ಠಕ್ಕರ್ –ಮಾನುಷ್‌ ಶಾ 11–8, 9–11, 11–6, 11–2 ರಿಂದ ಮಾಲ್ಡೀವ್ಸ್‌ನ ಮೊಹಮ್ಮದ್‌ ಶಫಾನ್ ಇಸ್ಮಾಯಿಲ್– ಮೂಷಾ ಮುನ್ಸಿಫ್ ಅಹ್ಮದ್ ಅವರನ್ನು ಸೋಲಿಸಿ 16ರ ಸುತ್ತು ತಲುಪಿದರು. ಸತ್ಯನ್– ಶರತ್ ಜೋಡಿ 11–5, 11–3, 11–3 ರಿಂದ ಮಂಗೋಲಿಯಾದ ಸೆರ್‌–ಒದ್ ಗನ್ಕುಯಾಗ್ ಅವರನ್ನು ಸೋಲಿಸಲು ತೆಗೆದುಕೊಂಡಿದ್ದು 13 ನಿಮಿಷಗಳನ್ನಷ್ಟೇ. ಮಿಕ್ಸೆಡ್‌ ಡಬಲ್ಸ್‌ನಲ್ಲಿ ಸೋಲು: ಗೊಂಗ್ಶು ಕೆನಾಲ್ ಸ್ಪೋರ್ಟ್ಸ್‌ ಪಾರ್ಕ್‌ನಲ್ಲಿ ನಡೆದ ಮಿಕ್ಸೆಡ್‌ ಡಬಲ್ಸ್‌ ವಿಭಾಗದ ಪಂದ್ಯದಲ್ಲಿ ಭಾರತದ ಸತ್ಯನ್– ಮಣಿಕಾ 2–3 ರಲ್ಲಿ ಸಿಂಗಪುರದ ಝೆ ಯು ಕ್ಲಾರೆನ್ಸ್‌– ಜಿಯಾಣ್ ಝೆಂಗ್ ಅವರಿಗೆ ಮಣಿಯುವ ಮೊದಲು ಹೋರಾಟ ಪ್ರದರ್ಶಿಸಿತು. ಸಿಂಗಪುರದ ಜೋಡಿ 11–7, 11–9, 11–13, 10–12, 3–11 ರಲ್ಲಿ ಜಯಗಳಿಸಿತು. ಶ್ರೀಜಾ ಅಕುಲಾ– ಹರ್ಮೀತ್ ದೇಸಾಯಿ ಕೂಡ ಸೋತರು. ಥಾಯ್ಲೆಂಡ್‌ನ ಒರಾವನ್ ಪರನಾಂಗ್– ಫಾಕಪೂಮ್ ಸಂಗುವಾನ್ಸಿನ್ 11–4, 11–6, 12–10 ರಲ್ಲಿ ಅವರನ್ನು ಸೋಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.