2023 | ಚೆಸ್‌: ಭಾರತ ತಂಡಗಳ ಶುಭಾರಂಭ ಹಾಂಗ್‌ಝೌ: ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ಏಷ್ಯನ್ ಕ್ರೀಡಾಕೂಟದ ಚೆಸ್‌ನಲ್ಲಿ ಶುಕ್ರವಾರ ಸುಲಭ ಗೆಲುವಿನೊಡನೆ ಅಭಿಯಾನ ಆರಂಭಿಸಿದವು. ಪುರುಷರ ತಂಡ 3.5–0.5ರಿಂದ ಮಂಗೋಲಿಯಾ ತಂಡವನ್ನು ಮಣಿಸಿದರೆ, ಮಹಿಳಾ ತಂಡ ಇಷ್ಟೇ ಅಂತರದಿಂದ ಫಿಲಿಪೀನ್ಸ್ ತಂಡದ ಮೇಲೆ ಜಯಗಳಿಸಿತು. ವೈಯಕ್ತಿಕ ವಿಭಾಗದ ಪಂದ್ಯಗಳು ರ‍್ಯಾಪಿಡ್‌ ಮಾದರಿಯಲ್ಲಿ ನಡೆದಿದ್ದವು. ತಂಡ ವಿಭಾಗದ ಸ್ಪರ್ಧೆಗಳು ‘ಸಾಂಪ್ರದಾಯಿಕ’ (ಕ್ಲಾಸಿಕಲ್) ಮಾದರಿಯಲ್ಲಿ ನಡೆಯುತ್ತಿವೆ. ಜಿಎಂಗಳಾದ ಅರ್ಜುನ್ ಇರಿಗೇಶಿ, ವಿದಿತ್‌ ಗುಜರಾತಿ ಮತ್ತು ಆರ್‌.ಪ್ರಜ್ಞಾನಂದ ಅವರು ಮಂಗೋಲಿಯಾದ ಎದುರಾಳಿಗಳ ಮೇಲೆ ಸುಲಭ ಜಯಗಳಿಸಿದರು. ಆದರೆ ಟಾಪ್‌ ಬೋರ್ಡ್‌ನಲ್ಲಿ ಜಿಎಂ ಡಿ.ಗುಕೇಶ್ ಅವರು ತಮಗಿಂತ ಕೆಳಕ್ರಮಾಂಕದ ಬಿಲ್ಗುನ್ ಸುಮಿಯ ಜತೆ ಡ್ರಾ ಮಾಡಿಕೊಂಡಿದ್ದು ಅನಿರೀಕ್ಷಿತ ಎನಿಸಿತು. ಭಾರತ ಪುರುಷರ ತಂಡ ಅಗ್ರ ಶ್ರೇಯಾಂಕ ಗಳಿಸಿದೆ. ಎರಡನೇ ಶ್ರೇಯಾಂಕದ ಚೀನಾ 3–1 ರಿಂದ ಫಿಲಿಪೀನ್ಸ್ ತಂಡವನ್ನು, ಪ್ರಬಲ ಉಜ್ಬೇಕಿಸ್ತಾನ ಇದೇ ಅಂತರದಿಂದ ಕಿರ್ಗಿಸ್ತಾನ ತಂಡವನ್ನು ಸೋಲಿಸಿದವು. ಮಹಿಳಾ ವಿಭಾಗದಲ್ಲಿ ಆರ್‌.ವೈಶಾಲಿ, ಬಿ.ಸವಿತಾ ಶ್ರೀ, ದ್ರೋಣವಲ್ಲಿ ಹಾರಿಕಾ ಅವರು ಫಿಲಿಪೀನ್ಸ್‌ ಎದುರಾಳಿಗಳ ಎದುರು ತಮ್ಮ ಪಂದ್ಯಗಳನ್ನು ಗೆದ್ದುಕೊಂಡರೆ, ಮೂರನೇ ಬೋರ್ಡ್‌ನಲ್ಲಿ ವಂತಿಕಾ ಅಗರವಾಲ್ ಕಪ್ಪುಕಾಯಿಗಳಲ್ಲಿ ಆಡಿ, ಜೇನ್ ಜೊಡಿಲಿನ್ ಫ್ರೋಂಡಾ ಜೊತೆ ಪಾಯಿಂಟ್ ಹಂಚಿಕೊಳ್ಳಬೇಕಾಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.