ಬ್ಯಾಡ್ಮಿಂಟನ್: ಪುರುಷರ ತಂಡ ವಿಭಾಗದಲ್ಲಿ ಪದಕ ಖಚಿತ ಹಾಂಗ್‌ಝೌ (ಪಿಟಿಐ): ಭಾರತ ಪುರುಷರ ತಂಡ ಅಷ್ಟೇನೂ ಪ್ರಬಲವಲ್ಲದ ನೇಪಾಳ ತಂಡವನ್ನು 3–0 ಯಿಂದ ಸೋಲಿಸಿ ಏಷ್ಯನ್ ಕ್ರೀಡಾಕೂಟದ ಬ್ಯಾಡ್ಮಿಂಟನ್‌ನಲ್ಲಿ ಶುಕ್ರವಾರ ಸೆಮಿಫೈನಲ್ ತಲುಪಿತು. ಆ ಮೂಲಕ 37 ವರ್ಷಗಳ ನಂತರ ಪದಕ ಖಚಿತಪಡಿಸಿಕೊಂಡಿತು. ಲಕ್ಷ್ಯಸೇನ್ 21–5, 21–8 ರಿಂದ ಪ್ರಿನ್ಸ್ ದಹಲ್ ವಿರುದ್ಧ ಜಯಗಳಿಸಿ 1–0 ಮುನ್ನಡೆ ಒದಗಿಸಿದರು. ಕಿದಂಬಿ ಶ್ರೀಕಾಂತ್ 21–4, 21–13 ರಿಂದ ಸುನೀಲ್ ಜೋಶಿ ಅವರನ್ನು ಸೋಲಿಸಿ ಮುನ್ನಡೆ ಹೆಚ್ಚಿಸಿದರು. ಮಿಥುನ್ ಮಂಜುನಾಥ ಸಹ ನೇರ ಗೇಮ್‌ಗಳಲ್ಲಿ ಬಿಷ್ಣು ಕುತ್ವಾಲ್ ಅವರನ್ನು ಸೋಲಿಸಿದರು. ಭಾರತ ತಂಡ ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾ ತಂಡವನ್ನು ಎದುರಿಸಲಿದೆ. ಕೊರಿಯಾ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಇಂಡೊನೇಷ್ಯಾ ತಂಡವನ್ನು 3–1 ಅಂತರದಿಂದ ಸೋಲಿಸಿತು. ಸೆಮಿಫೈನಲ್‌ನಲ್ಲಿ ಸೋತ ತಂಡಗಳಿಗೂ ಕಂಚಿನ ಪದಕ ನೀಡಲಾಗುತ್ತದೆ. ಭಾರತ ಈ ಹಿಂದೆ ಕೊನೆಯ ಬಾರಿ, 1986ರ ಸೋಲ್ ಗೇಮ್ಸ್‌ನಲ್ಲಿ ಪುರುಷರ ತಂಡ ವಿಭಾಗದಲ್ಲಿ ಪದಕ ಗೆದ್ದಿತ್ತು. ಆ ಬಾರಿ ಸೈಯ್ಯದ್ ಮೋದಿ ನೇತೃತ್ವದ ತಂಡ ಕಂಚಿನ ಪದಕ ಗೆದ್ದುಕೊಂಡಿತ್ತು. ಆದರೆ ಮಹಿಳೆಯರ ವಿಭಾಗದಲ್ಲಿ ಭಾರತಕ್ಕೆ ನಿರಾಸೆ ಕಾದಿತ್ತು. ಪಿ.ವಿ.ಸಿಂಧು ನೇತೃತ್ವದ ತಂಡ 0–3 ರಲ್ಲಿ ಪ್ರಬಲ ಥಾಯ್ಲೆಂಡ್‌ಗೆ ಶರಣಾಯಿತು. ಸಿಂಧು 21–14, 15–21, 14–21 ರಿಂದ ವಿಶ್ವದ 12ನೇ ನಂಬರ್ ಆಟಗಾರ್ತಿ ಪರ್ಣಪವಿ ಚೊಚುವಾಂಗ್ ಅವರಿಗೆ ಮೊದಲ ಸಿಂಗಲ್ಸ್‌ನಲ್ಲಿ ಸೋತರು. ಉಳಿದ ಇಬ್ಬರು ಆಟಗಾರ್ತಿಯರು ನೇರ ಗೇಮ್‌ಗಳಲ್ಲಿ ಸೋತರು. ಟ್ರಿಸಾ ಜೋಳಿ– ಗಾಯತ್ರಿ ಗೋಪಿಚಂದ್ 19–21, 5–21ರಲ್ಲಿ ಹತ್ತನೇ ಕ್ರಮಾಂಕದ ಜೊಂಗಕೊಲ್ಫನ್ ಕಿಟ್ಟಿತರಕುಲ್– ರವಿಂದ ಪ್ರಜೊಂಗ್‌ಜೈ ಅವರಿಗೆ ಸೋತರು. ಅಸ್ಮಿತಾ ಚಲಿಹ 9–21, 16–21 ರಿಂದ ಬುಸಾನನ್ ಒಂಗ್ಬಮ್‌ರುಂಗ್‌ಫಾನ್ ಅವರಿಗೆ ಶರಣಾದರು. ಭಾರತ ಮಹಿಳಾ ತಂಡ 2014ರ ಕ್ರೀಡೆಗಳಲ್ಲಿ ಕೊನೆಯದಾಗಿ ಕಂಚಿನ ಪದಕ ಪಡೆದಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.