ಕಿರಣ್‌ಗೆ ಶಾಟ್‌ಪಟ್‌ ಕಂಚು ಹಾಂಗ್‌ಝೌ (ಪಿಟಿಐ): ಕಿರಣ್‌ ಬಾಲಿಯಾನ್‌ ಅವರು ಏಷ್ಯನ್‌ ಕ್ರೀಡಾಕೂಟದ ಮಹಿಳೆಯರ ಶಾಟ್‌ಪಟ್‌ ಸ್ಪರ್ಧೆಯಲ್ಲಿ 72 ವರ್ಷಗಳ ಬಿಡುವಿನ ಬಳಿಕ ಭಾರತಕ್ಕೆ ಪದಕ ತಂದುಕೊಟ್ಟ ಸಾಧನೆ ಮಾಡಿದರು. ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಅವರು ಕಬ್ಬಿಣದ ಗುಂಡನ್ನು 17.36 ಮೀ. ಎಸೆದರು. ಈ ಮೂಲಕ ಅಥ್ಲೆಟಿಕ್ಸ್‌ನಲ್ಲಿ ಭಾರತದ ಪದಕ ಬೇಟೆಗೆ ಚಾಲನೆ ನೀಡಿದರು. ಏಷ್ಯನ್‌ ಗೇಮ್ಸ್‌ನ ಮಹಿಳೆಯರ ಶಾಟ್‌ಪಟ್‌ನಲ್ಲಿ ಪದಕ ಗೆದ್ದ ಭಾರತದ ಎರಡನೇ ಕ್ರೀಡಾಪಟು ಎಂಬ ಗೌರವ 24 ವರ್ಷದ ಕಿರಣ್‌ಗೆ ಒಲಿಯಿತು. 1951ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಚೊಚ್ಚಲ ಕೂಟದಲ್ಲಿ ಬಾರ್ಬರಾ ವೆಬ್‌ಸ್ಟರ್‌ ಅವರು ಕಂಚು ಗೆದ್ದಿದ್ದರು. ಕಿರಣ್‌ ಅವರ ವೈಯಕ್ತಿಕ ಶ್ರೇಷ್ಠ ಪ್ರದರ್ಶನ 17.92 ಮೀ. ಆಗಿದೆ. ಸೆ.10 ರಂದು ಚಂಡೀಗಡದಲ್ಲಿ ನಡೆದಿದ್ದ ಇಂಡಿಯನ್‌ ಗ್ರ್ಯಾನ್‌ ಪ್ರಿ ಕೂಟದಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿತ್ತು. ಚೀನಾದ ಗಾಂಗ್‌ ಲಿಜಿಯಾವೊ (19.58 ಮೀ.) ಮತ್ತು ಸೊಂಗ್‌ ಜಿಯಾಯುವಾನ್ (18.92 ಮೀ.) ಅವರು ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಜಯಿಸಿದರು. ಕಣದಲ್ಲಿದ್ದ ಭಾರತದ ಇನ್ನೊಬ್ಬ ಸ್ಪರ್ಧಿ ಮನ್‌ಪ್ರೀತ್‌ ಕೌರ್‌ (16.25 ಮೀ.) ಐದನೇ ಸ್ಥಾನ ಗಳಿಸಿದರು. ‘ಇತಿಹಾಸದ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ (1951ರ ಬಳಿಕ ಪದಕ ಗೆದ್ದ ಮೊದಲ ಕ್ರೀಡಾಪಟು). ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಬೇಕೆಂಬ ಗುರಿ ಇಟ್ಟುಕೊಂಡಿದ್ದೆ. ಅದು ಸಾಧ್ಯವಾಗದಿದ್ದರೂ, ಪದಕ ಗೆಲ್ಲಲು ಯಶಸ್ವಿಯಾದದ್ದು ಸಂತಸ ಉಂಟುಮಾಡಿದೆ’ ಎಂದು ಕಿರಣ್‌ ಪ್ರತಿಕ್ರಿಯಿಸಿದರು. ಮಹಿಳೆಯರ 400 ಮೀ. ಓಟದಲ್ಲಿ ಐಶ್ವರ್ಯಾ ಮಿಶ್ರಾ 52.73 ಸೆ.ಗಳೊಂದಿಗೆ ಫೈನಲ್‌ ಪ್ರವೇಶಿಸಿದರು. ಆದರೆ ಹಿಮಾಂಶಿ ಮಲಿಕ್ (57.82 ಮೀ.) ಹೀಟ್ಸ್‌ನಲ್ಲಿ ಐದನೇ ಸ್ಥಾನ ಪಡೆದು ಫೈನಲ್‌ ಪ್ರವೇಶಿಸಲು ವಿಫಲರಾದರು. ಪುರುಷರ 400 ಮೀ. ಓಟದಲ್ಲಿ ಮೊಹಮ್ಮದ್‌ ಅಜ್ಮಲ್‌ ಅವರು ಹೀಟ್ಸ್‌ನಲ್ಲಿ 45.76 ಸೆ.ಗಳೊಂದಿಗೆ ಫೈನಲ್‌ ಪ್ರವೇಶಿಸಿದರೆ, ಮೊಹಮ್ಮದ್‌ ಅನಾಸ್‌ ಯಹ್ಯಾ (46.29 ಸೆ.), ಪದಕ ಸುತ್ತು ತಲುಪುವಲ್ಲಿ ಎಡವಿದರು. ಮಹಿಳೆಯರ ಹ್ಯಾಮರ್‌ ಥ್ರೋ ಸ್ಪರ್ಧೆಯಲ್ಲಿ ತಾನ್ಯಾ ಚೌಧರಿ (60.50 ಮೀ.ದೂರ) ಮತ್ತು ರಚನಾ ಕುಮಾರಿ (58.13 ಮೀ.) ಅವರು ಕ್ರಮವಾಗಿ ಏಳು ಹಾಗೂ ಒಂಬತ್ತನೇ ಸ್ಥಾನ ಪಡೆದರು. ಪ್ರಿಯಾಂಕಾಗೆ ಐದನೇ ಸ್ಥಾನ: ಬೆಳಿಗ್ಗೆ ನಡೆದ ಮಹಿಳೆಯರ 20 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಪ್ರಿಯಾಂಕಾ ಗೋಸ್ವಾಮಿ ಅವರು 1 ಗಂಟೆ. 43.7 ಸೆ. ಗಳೊಂದಿಗೆ ಐದನೇ ಸ್ಥಾನ ಗಳಿಸಿದರು. ಪುರುಷರ ವಿಭಾಗದಲ್ಲಿ ಆಕಾಶ್‌ದೀಪ್‌ ಸಿಂಗ್‌ (1 ಗಂಟೆ 27.33 ನಿ.) ಐದನೇ ಸ್ಥಾನ ತಮ್ಮದಾಗಿಸಿಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.