ಟೆನಿಸ್‌: ರಾಮಕುಮಾರ್‌–ಸಾಕೇತ್‌ಗೆ ಬೆಳ್ಳಿ ಹಾಂಗ್‌ಝೌ: ಎರಡನೇ ಶ್ರೇಯಾಂಕದ ರಾಮಕುಮಾರ್ ರಾಮನಾಥನ್ ಮತ್ತು ಸಾಕೇತ್‌ ಮೈನೇನಿ ಅವರು ಏಷ್ಯನ್ ಗೇಮ್ಸ್‌ ಟೆನಿಸ್‌ ಪುರುಷರ ಡಬಲ್ಸ್‌ನಲ್ಲಿ ಬೆಳ್ಳಿಯ ಪದಕಕ್ಕೆ ಸಮಾಧಾನಪಟ್ಟುಕೊಳ್ಳಬೇಕಾಯಿತು. ಶುಕ್ರವಾರ ನಡೆದ ಫೈನಲ್‌ನಲ್ಲಿ ಚೀನಾ ತೈಪೆಯ ಸು ಯು ಸಿಯವು ಮತ್ತು ಜೇಸನ್ ಜಂಗ್ ಅವರ 6–4, 6–4 ನೇರ ಸೆಟ್‌ಗಳಿಂದ ಭಾರತದ ಜೋಡಿಯನ್ನು ಸೋಲಿಸಿ ಚಿನ್ನದ ಪದಕ ಗೆದ್ದುಕೊಂಡರು. ಮಿಕ್ಸೆಡ್‌ ಡಬಲ್ಸ್‌ ವಿಭಾಗದಲ್ಲಿ ರೋಹನ್ ಬೋಪಣ್ಣ– ರುತುಜಾ ಭೋಸಲೆ ಜೋಡಿ ಫೈನಲ್ ತಲುಪಿದೆ. ಆ ಮೂಲಕ ಟೆನಿಸ್‌ನಲ್ಲಿ ಭಾರತಕ್ಕೆ ಚಿನ್ನ ಅಥವಾ ಬೆಳ್ಳಿ ಖಚಿತವಾಗಿದೆ. ತೈಪೆಯ ಜೋಡಿ ಶ್ರೇಯಾಂಕರಹಿತವಾಗಿತ್ತು. ಆದರೆ ಸು ಯು (182) ಮತ್ತು ಜಂಗ್‌ (231) ಅವರು ಸಿಂಗಲ್ಸ್‌ನಲ್ಲಿ ಉತ್ತಮ ರ‍್ಯಾಂಕಿಂಗ್ ಹೊಂದಿದ್ದು ಅದು ಅವರ ಆಟದ ಗುಣಮಟ್ಟದಲ್ಲಿ ವ್ಯಕ್ತವಾಯಿತು. ಸು ಅವರು ‍ಪ್ರಬಲ ಸರ್ವ್‌ಗಳ ಜೊತೆ ಬೇಸ್‌ಲೈನ್‌ನಿಂದ ಅಮೋಘ ಆಟವಾಡಿದರು. ಅವರಿಗೆ ಪೂರಕವಾಗಿ ಜಂಗ್‌ ನೆಟ್‌ ಬಳಿಯಿಂದ ಅತ್ಯುತ್ತಮ ಹೊಡೆತಗಳನ್ನು ಪ್ರದರ್ಶಿಸಿದರು. ರಾಮಕುಮಾರ್ ಅವರಿಗೆ ಇದು ಏಷ್ಯನ್ ಗೇಮ್ಸ್‌ನಲ್ಲಿ ಮೊದಲ ಪದಕ. ಮೈನೇನಿ ಅವರಿಗೆ ಇದು ಮೂರನೇ ಪದಕ. ಈ ಹಿಂದೆ, 2014ರ ಇಂಚಿಯೊನ್ ಗೇಮ್ಸ್‌ನಲ್ಲಿ ಸನಮ್ ಸಿಂಗ್ ಜೊತೆ ಪುರುಷರ ಡಬಲ್ಸ್‌ನಲ್ಲಿ ಬೆಳ್ಳಿ ಗೆದ್ದಿದರು. ಸಾನಿಯಾ ಮಿರ್ಜಾ ಜೊತೆ ಮಿಕ್ಸೆಡ್‌ ಡಬಲ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಮೊದಲ ಸೆಟ್‌ನ ಐದನೇ ಗೇಮ್‌ನಲ್ಲಿ ಭಾರತೀಯ ಆಟಗಾರನ (ರಾಮಕುಮಾರ್‌) ಸರ್ವ್ ಬ್ರೇಕ್‌ ಮಾಡಿದ ತೈಪೆಯ ಜೋಡಿ ನಿರ್ಣಾಯಕ ಮುನ್ನಡೆ ಪಡೆಯಿತು. ಆ ಗೇಮ್‌ ಸ್ಕೋರ್‌ 30–30 ಆಗಿದ್ದಾಗ ತೈಪೆಯ ಆಟಗಾರ ಜಂಗ್‌ ಸರ್ವ್‌ನ ಅಮೋಘ ರಿಟರ್ನ್‌ ಮತ್ತು ಉತ್ತಮ ಫೋರ್‌ಹ್ಯಾಂಡ್‌ ಮೂಲಕ ತಂಡಕ್ಕೆ ಬ್ರೇಕ್‌ ಪಾಯಿಂಟ್‌ ಪಡೆಯಲು ನೆರವಾದರು. ಎರಡನೇ ಸೆಟ್‌ನಲ್ಲೂ ರಾಮಕುಮಾರ್‌ ಸರ್ವ್‌ನಲ್ಲಿ ಪರದಾಡಿದರು. ‘ಇದು ನನ್ನ ಏಷ್ಯನ್ ಗೇಮ್ಸ್‌ನಲ್ಲಿ ಮೊದಲ ಪದಕ. ಭಾರತಕ್ಕೆ ಪದಕ ಗೆಲ್ಲಬೇಕೆಂಬುದು ನನ್ನ ಆಸೆಯಾಗಿತ್ತು. ಅದೂ ಸಾಕಿ (ಸಾಕೇತ್‌) ಜೊತೆ ಬಂದಿದೆ. ಸಂತಸವಾಗಿದೆ’ ಎಂದು ರಾಮನಾಥನ್ ಹೇಳಿದರು. ಚಿನ್ನಕ್ಕೆ ಸೆಣಸಾಟ: ರೋಹನ್ ಬೋಪಣ್ಣ– ರುತುಜಾ ಭೋಸಲೆ ಅವರು ಮಿಕ್ಸೆಡ್‌ ಡಬಲ್ಸ್‌ ಸೆಮಿಫೈನಲ್‌ನಲ್ಲಿ ಚೀನಾ ತೈಪೆಯ ಚಾನ್‌ ಹಾವೊ–ಚಿಂಗ್ ಮತ್ತು ಯು ಸಿಯು ಸು ಜೋಡಿಯನ್ನು 6–1, 3–6, 10–4 ರಿಂದ ಸೋಲಿಸಿತು. ‘ದುರದೃಷ್ಟವಶಾತ್ ನಾವು ಒಂದು ಪಂದ್ಯ ಗೆಲ್ಲದೇ ಹೋದೆವು. ಫೈನಲ್‌ನಲ್ಲಿ ಚೀನಾ ತೈಪೆ ಆಟಗಾರರಿಗೆ ಉತ್ತಮ ‍ಆಟದ ಶ್ರೇಯಸ್ಸು ಸಲ್ಲಬೇಕು. ಭಾರತಕ್ಕೆ ಪದಕ ತಂದುಕೊಟ್ಟಿದ್ದರಿಂದ ಸಂತಸವಾಗಿದೆ’ ಎಂದು ಮೈನೇನಿ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.