ಟೇಬಲ್ ಟೆನಿಸ್: ಚಾಂಪಿಯನ್ ಜೋಡಿಗೆ ಸೋಲುಣಿಸಿದ ಸುತೀರ್ಥಾ–ಐಹಿಕಾ ಹಾಂಗ್‌ಝೌ (ಪಿಟಿಐ): ಆತಿಥೇಯ ಚೀನಾದ ವಿಶ್ವ ಚಾಂಪಿಯನ್‌ ಜೋಡಿ ಚೆನ್‌ ಮೆಂಗ್– ಯಿದಿ ವಾಂಗ್‌ ಅವರಿಗೆ ಆಘಾತ ನೀಡಿದ ಭಾರತದ ಸುತೀರ್ಥಾ ಮುಖರ್ಜಿ ಮತ್ತು ಐಹಿಕಾ ಮುಖರ್ಜಿ ಅವರು ಏಷ್ಯನ್ ಕ್ರೀಡಾಕೂಟದ ಟೇಬಲ್ ಟೆನಿಸ್‌ ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಶನಿವಾರ ಸೆಮಿಫೈನಲ್ ತಲುಪಿದರು. ಕ್ವಾರ್ಟರ್‌ಫೈನಲ್‌ನಲ್ಲಿ ಸುತೀರ್ಥ ಮತ್ತು ಐಹಿಕಾ 11–5, 11–5, 5–11, 11–9 ರಿಂದ ವಿಶ್ವದ ಎರಡನೇ ನಂಬರ್‌ ಆಟಗಾರ್ತಿಯರನ್ನು ಸೋಲಿಸಿದರು. ಈ ಗೆಲುವು ಮಹತ್ವಪೂರ್ಣ. ಏಕೆಂದರೆ ಭಾರತ ಏಷ್ಯನ್ ಕ್ರೀಡಾಕೂಟದ ಟೇಬಲ್ ಟೆನಿಸ್‌ ಮಹಿಳೆಯ ಡಬಲ್ಸ್‌ನಲ್ಲಿ ಇದುವರೆಗೆ ಪದಕ ಗೆದ್ದಿಲ್ಲ. ಈಗ ಇವರಿಬ್ಬರಿಗೆ ಪದಕ ಖಚಿತವಾಗಿದೆ. ಭಾರತದ ಆಟಗಾರ್ತಿಯರು ಆರಂಭದಿಂದಲೇ ಚೀನಾ ಎದುರಾಳಿಗಳಿಗೆ ಹೊಂದಿಕೊಳ್ಳಲು ಅವಕಾಶ ನೀಡಲಿಲ್ಲ. ಚೀನಾ ಈ ಪಂದ್ಯದಲ್ಲಿ ಸುಲಭ ಗೆಲುವು ಸಾಧಿಸಬಹುದೆಂಬ ನಿರೀಕ್ಷೆ ತಿರುವುಮುರುವಾಯಿತು. ಸುತೀರ್ಥಾ– ಐಹಿಕಾ ಕೇವಲ ಎಂಟು ನಿಮಿಷಗಳಲ್ಲಿ ಮೊದಲ ಗೇಮ್ ಗೆದ್ದರು. ಎರಡನೇ ಗೇಮ್‌ ಕೂಡ ಇದೇ ಹಾದಿಯಲ್ಲಿ ನಡೆದು 9 ನಿಮಿಷಗಳಲ್ಲಿ ಭಾರತದ ಪಾಲಾಯಿತು. ಮೂರನೇ ಗೇಮ್‌ನಲ್ಲಿ ಪ್ರತಿರೋಧ ಒಡ್ಡಿದ ಚೀನಾದ ಆಟಗಾರ್ತಿಯರು ಮೇಲುಗೈ ಸಾಧಿಸಿದರು. ಆದರೆ ಶೀಘ್ರ ಲಯಕ್ಕೆ ಮರಳಿದ ಭಾರತದ ಆಟಗಾರ್ತಿಯರು ನಂತರದ ನಾಲ್ಕನೇ ಗೇಮ್‌ನಲ್ಲಿ ಮರಳಿ ಹಿಡಿತ ಪಡೆದರಯ. ಮೆಂಗ್‌ ಅವರ ಫೋರ್‌ಹ್ಯಾಂಡ್ ಹೊಡೆತದಲ್ಲಿ ಚೆಂಡು ನೆಟ್‌ಗೆ ಸಿಲುಕಿ ಭಾರತ ಗೆಲುವಿನ ಪಾಯಿಂಟ್‌ ಪಡೆಯಿತು. ಹೊರಬಿದ್ದ ಮಣಿಕಾ: ಇದಕ್ಕೆ ಮೊದಲು ಕಾಮನ್ವೆಲ್ತ್ ಗೇಮ್ಸ್ ಚಿನ್ನ ವಿಜೇತೆ ಮಣಿಕಾ ಬಾತ್ರಾ ಮಹಿಳೆಯರ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್‌ನ ಮಹತ್ವದ ಹಂತದಲ್ಲಿ ಸಾಕಷ್ಟು ತಪ್ಪುಗಳನ್ನೆಸಗಿ ಚೀನಾದ ಯಿದಿ ವಾಂಗ್ಎದುರು 8–11, 12–10, 6–11, 4–11, 14–12, 5–11 ರಿಂದ ಪರಾಭವಗೊಂಡರು. ಚೀನಾದ ಆಟಗಾರ್ತಿ ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಆ ಮೂಲಕ ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿತು. ಇದಕ್ಕೆ ಮೊದಲು, ಭಾರತದ ಪುರುಷರ ಡಬಲ್ಸ್‌ ಜೋಡಿಯಾದ ಮಾನುಷ್‌ ಶಾ ಮತ್ತು ಮಾನವ್ ಯು.ಠಕ್ಕರ್ ಅವರೂ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲನುಭವಿಸಿದ್ದರು. ದಕ್ಷಿಣ ಕೊರಿಯದ ಜೋಡಿ ವೂಜಿನ್ ಜಾಂಗ್ ಮತ್ತು ಜಾಂಗ್‌ಹೂನ್ ಲಿಮ್ 8–11, 11–7, 10–12, 11–6, 9–11 ರಿಂದ ಭಾರತದ ಆಟಗಾರರ ಮೇಲೆ ಜಯಗಳಿಸಿ ಅಂತಿಮ ನಾಲ್ಕರ ಹಂತಕ್ಕೆ ಮುನ್ನಡೆಯಿತು. ಜಾಂಗ್ ಮತ್ತು ಲಿಮ್ ವಿಶ್ವಕ್ರಮಾಂಕದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ‘ನಾವು ಉತ್ತಮ ಹೋರಾಟ ನಡೆಸಿದೆವು. ಅಂತಿಮ ಗೇಮ್‌ ನಲ್ಲಿ 9–9 ರಲ್ಲಿ ಸ್ಕೋರ್ ಸಮನಾಗಿತ್ತು. ಗೆಲುವಿನ ಅಂಚಿನಲ್ಲೇ ಇದ್ದೆವು. ಆದರೆ ಕೆಲವೊಮ್ಮೆ ಪಾಠ ಕಲಿತು ಮುಂದೆ ಸಾಗಬೇಕಾಗುತ್ತದೆ’ ಎಂದು ಪಂದ್ಯದ ನಂತರ ಮಾನುಷ್ ಪ್ರತಿಕ್ರಿಯಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.