2023 | ಅಥ್ಲೆಟಿಕ್ಸ್‌: ಕಾರ್ತಿಕ್‌ಗೆ ಬೆಳ್ಳಿ, ಗುಲ್ವೀರ್‌ಗೆ ಕಂಚು ಹಾಂಗ್‌ಝೌ: ಭಾರತದ ದೀರ್ಘ ಅಂತರದ ಓಟಗಾರರಾದ ಕಾರ್ತಿಕ್‌ ಕುಮಾರ್‌ ಮತ್ತು ಗುಲ್ವೀರ್‌ ಸಿಂಗ್‌ ಅವರು ಏಷ್ಯನ್‌ ಕ್ರೀಡಾಕೂಟದ ಅಥ್ಲೆಟಿಕ್ಸ್‌ನ ಪುರುಷರ 10 ಸಾವಿರ ಮೀ. ಓಟದಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದುಕೊಂಡರು. ಶನಿವಾರ ನಡೆದ ಸ್ಪರ್ಧೆಯನ್ನು ಕಾರ್ತಿಕ್‌ 28 ನಿ. 15.38 ಸೆ.ಗಳಲ್ಲಿ ಪೂರ್ಣಗೊಳಿಸಿದರು. ಮೂರನೇ ಸ್ಥಾನ ಪಡೆದ ಗುಲ್ವೀರ್‌ 28 ನಿ. 17.21 ಸೆ.ಗಳನ್ನು ತೆಗೆದುಕೊಂಡರು. ಚಿನ್ನದ ಪದಕ ಬಹರೇನ್‌ನ ಬಿರ್ಹಾನು ಯೆಮತಾವ್ ಬಲೆವ್ (28 ನಿ. 13.62 ಸೆ.) ಅವರ ಪಾಲಾಯಿತು. ಕಾರ್ತಿಕ್‌ ಮತ್ತು ಗುಲ್ವೀರ್‌ ಕೊನೆಯ 100 ಮೀ. ಇದ್ದಾಗ ಪದಕದತ್ತ ಮುನ್ನಡೆದರು. ಇತರ ಮೂವರು ಸ್ಪರ್ಧಿಗಳು ಒಬ್ಬರಿಗೊಬ್ಬರು ಡಿಕ್ಕಿ ಹೊಡೆದು ಬಿದ್ದ ಕಾರಣ ಭಾರತದ ಓಟಗಾರರು ಲೀಡ್‌ ಪಡೆದುಕೊಂಡರು. ಕಾರ್ತಿಕ್‌ ಅವರು ವೈಯಕ್ತಿಕ ಶ್ರೇಷ್ಠ ಸಮಯ ದಾಖಲಿಸಿದರು. ಕಳೆದ ವರ್ಷ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 28 ನಿ. 55 ಸೆ.ಗಳಲ್ಲಿ ಗುರಿ ತಲುಪಿದ್ದು ಅವರ ಶ್ರೇಷ್ಠ ಸಾಧನೆ ಆಗಿತ್ತು. ‘ಪದಕ ಗೆಲ್ಲುವ ನಿರೀಕ್ಷೆ ಇತ್ತು. ರಾಷ್ಟ್ರೀಯ ದಾಖಲೆ ಮುರಿಯಬೇಕೆಂಬ ಗುರಿಯೊಂದಿಗೆ ಇಲ್ಲಿಗೆ ಬಂದಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ಆರಂಭದಲ್ಲಿ ನಿಧಾನವಾಗಿ ಓಡಿದ್ದರಿಂದ ದಾಖಲೆ ಸ್ಥಾಪಿಸುವಲ್ಲಿ ವಿಫಲನಾದೆ’ ಎಂದು ಕಾರ್ತಿಕ್‌ ಪ್ರತಿಕ್ರಿಯಿಸಿದರು. 10 ಸಾ. ಮೀ. ಓಟದಲ್ಲಿ ರಾಷ್ಟ್ರೀಯ ದಾಖಲೆ ಸುರೇಂದ್ರ ಸಿಂಗ್‌ (28 ನಿ. 02.89 ಸೆ.) ಅವರ ಹೆಸರಿನಲ್ಲಿದೆ. 2008 ರಲ್ಲಿ ಈ ದಾಖಲೆ ಸ್ಥಾಪಿಸಿದ್ದರು. ಐಶ್ವರ್ಯಾಗೆ 4ನೇ ಸ್ಥಾನ: ಮಹಿಳೆಯರ 400 ಮೀ. ಓಟದಲ್ಲಿ ಐಶ್ವರ್ಯಾ ಮಿಶ್ರಾ 53.50 ಸೆ.ಗಳೊಂದಿಗೆ ನಾಲ್ಕನೇ ಸ್ಥಾನ ಪಡೆದು, ಅಲ್ಪ ಅಂತರದಿಂದ ಪದಕ ವಂಚಿತರಾದರು. ಪುರುಷರ ವಿಭಾಗದ ಇದೇ ಸ್ಪರ್ಧೆಯಲ್ಲಿ ಮೊಹಮ್ಮದ್‌ ಅಜ್ಮಲ್‌ 45.97 ಸೆ.ಗಳೊಂದಿಗೆ ಐದನೇ ಸ್ಥಾನ ಗಳಿಸಿದರು. ಪುರುಷರ 1,500 ಮೀ. ಓಟದಲ್ಲಿ ಜಿನ್ಸನ್‌ ಜಾನ್ಸನ್‌ ಮತ್ತು ಅಜಯ್‌ ಕುಮಾರ್ ಸರೋಜ್‌ ಅವರು ಹೀಟ್ಸ್‌ನಲ್ಲಿ ಕ್ರಮವಾಗಿ ಎರಡು ಮತ್ತು ಐದನೇ ಸ್ಥಾನ ಪಡೆದು ಫೈನಲ್‌ ಪ್ರವೇಶಿಸಿದರು. ಪುರುಷರ ಲಾಂಗ್‌ಜಂಪ್‌ನಲ್ಲಿ ಪದಕ ಭರವಸೆ ಎನಿಸಿರುವ ಜೆಸ್ವಿನ್‌ ಆಲ್ಡ್ರಿನ್‌ ಜಾನ್ಸನ್‌ (7.67 ಮೀ.) ಮತ್ತು ಮುರಳಿ ಶ್ರೀಶಂಕರ್‌ (7.97 ಮೀ.) ಅವರು ಉತ್ತಮ ಸಾಧನೆಯೊಂದಿಗೆ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡರು. ಮಹಿಳೆಯರ 100 ಮೀ. ಹರ್ಡಲ್ಸ್‌ನಲ್ಲಿ ಜ್ಯೋತಿ ಯರ‍್ರಾಜಿ 13.03 ಸೆ.ಗಳೊಂದಿಗೆ ತಮ್ಮ ಹೀಟ್ಸ್‌ನಲ್ಲಿ ಎರಡನೇ ಸ್ಥಾನ ಪಡೆದು ಪದಕ ಸುತ್ತು ತಲುಪಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.