-2023 | ಬ್ಯಾಡ್ಮಿಂಟನ್: ಪುರುಷರ ತಂಡ ಫೈನಲ್‌ಗೆ ಹಾಂಗ್‌ಝೌ: ರೋಚಕ ಹಣಾಹಣಿಯ ನಿರ್ಣಾಯಕ ಪಂದ್ಯದಲ್ಲಿ ಎದೆಗುಂದದೇ ಆಡಿದ ಕಿದಂಬಿ ಶ್ರೀಕಾಂತ್, ಏಷ್ಯನ್ ಕ್ರೀಡಾಕೂಟದ ಬ್ಯಾಡ್ಮಿಂಟನ್ ತಂಡ ವಿಭಾಗದಲ್ಲಿ ಭಾರತ ತಂಡವನ್ನು ಶನಿವಾರ ಫೈನಲ್ ತಲುಪಿಸಿದರು. ಪ್ರಬಲ ದಕ್ಷಿಣ ಕೊರಿಯಾ ಮೇಲೆ 3–2 ರಿಂದ ಗೆದ್ದ ಭಾರತ, ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಮೊತ್ತಮೊದಲ ಬಾರಿ ಈ ವಿಭಾಗದಲ್ಲಿ ಚಿನ್ನ ಗೆಲ್ಲಲು ಇನ್ನೊಂದೇ ಹೆಜ್ಜೆ ಬಾಕಿಯಿದೆ. ಏಷ್ಯನ್ ಗೇಮ್ಸ್‌ನ ಬ್ಯಾಡ್ಮಿಂಟನ್ ತಂಡ ವಿಭಾಗದಲ್ಲಿ ಭಾರತ ಫೈನಲ್ ತಲುಪಿದ್ದು ಇದೇ ಮೊದಲ ಬಾರಿ. ವಿಶ್ವದ ಏಳನೇ ಕ್ರಮಾಂಕದ ಆಟಗಾರ ಎಚ್‌.ಎಸ್‌.ಪ್ರಣಯ್ 18–21, 21–16, 21–19 ರಿಂದ ಜಿಯೊನ್ ಹಯೊಕ್ ಜಿನ್ ಅವರನ್ನು ಸೋಲಿಸಿ ತಂಡಕ್ಕೆ 1–0 ಮುನ್ನಡೆ ಒದಗಿಸಿದರು. ಆದರೆ ಅನುಭವಿಗಳಾದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಹೋರಾಟ ಕಂಡ ಡಬಲ್ಸ್‌ನಲ್ಲಿ 13–21, 24–26ರಲ್ಲಿ ವಿಶ್ವ ಚಾಂಪಿಯನ್ನರಾದ ಸಿಯೊ ಸಿಯುಂಗ್–ಜೇ ಮತ್ತು ಕಾಂಗ್ ಮಿನ್–ಹ್ಯುಕ್ ಅವರಿಗೆ ಸೋತಿದ್ದರಿಂದ ಸ್ಕೋರ್ 1–1 ಆಯಿತು. ಆದರೆ ಲಕ್ಷ್ಯ ಸೇನ್ ಅಧಿಕಾರಯುತ ಪ್ರದರ್ಶನ ನೀಡಿ 21–7, 21–9 ರಿಂದ ಲೀ ಯಂಗ್‌ಯು ಅವರನ್ನು ಮಣಿಸಿದರು. ಎರಡನೇ ಡಬಲ್ಸ್‌ನಲ್ಲಿ ಎಂ.ಆರ್‌.ಅರ್ಜುನ್ – ಧ್ರುವ್ ಕಪಿಲ ಜೋಡಿ 16–21, 11–21 ರಲ್ಲಿ ನೇರ ಆಟಗಳಿಂದ ಕಿಮ್‌ ವೊನ್ಹೊ–ಎನ್‌.ಎ.ಸುಂಗ್‌ಸಿಯುಂಗ್ ಅವರಿಗೆ ಸೋತ ಕಾರಣ ಸ್ಕೋರ್ ಮತ್ತೊಮ್ಮೆ (2–2ರಲ್ಲಿ) ಸಮನಾಯಿತು. 2021ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕ ಗೆದ್ದಿದ್ದ ಕಿದಂಬಿ ಶ್ರೀಕಾಂತ್ ಅವರು ಮೂರು ಗೇಮ್‌ಗಳಿಗೆ ಬೆಳೆದ ನಿರ್ಣಾಯಕ ಸಿಂಗಲ್ಸ್‌ನಲ್ಲಿ ಸಂಯಮದಿಂದ ಆಡಿ 12–21, 21–16, 21–14 ರಿಂದ ಚೊ ಜಿಯೊನಿಯೊಪ್ ಅವರ ಸವಾಲನ್ನು ಅಡಗಿಸಿದರು. ಭಾರತ ಫೈನಲ್‌ನಲ್ಲಿ ಚೀನಾವನ್ನು ಎದುರಿಸಲಿದೆ. ಕಳೆದ ವರ್ಷ ಥಾಮಸ್ ಕಪ್ ಗೆದ್ದುಕೊಂಡಿದ್ದ ಭಾರತ ತಂಡದ ಮೇಲೆ ಈಗ ನಿರೀಕ್ಷೆ ಹೆಚ್ಚಾಗಿದೆ. ಭಾರತ, 1986ರ ಸೋಲ್ ಕ್ರೀಡೆಗಳಲ್ಲಿ ಕೊನೆಯ ಬಾರಿ ಪದಕ ಗೆದ್ದಿತ್ತು. ಆ ಬಾರಿ ಲಕ್ಷ್ಯ ಸೇನ್ ಅವರ ಮೆಂಟರ್ ಆಗಿದ್ದ ಪ್ರಕಾಶ ಪಡುಕೋಣೆ, ವಿಮಲ್ ಕುಮಾರ್ ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತ ಹಾಂಗ್‌ಝೌ ಕ್ರೀಡೆಗೆ ಮೊದಲು ಬ್ಯಾಡ್ಮಿಂಟನ್‌ನಲ್ಲಿ 10 ಪದಕಗಳನ್ನು ಗೆದ್ದುಕೊಂಡಿತ್ತು. ಇದರಲ್ಲಿ ಸಿಂಗಲ್ಸ್‌ನಲ್ಲಿ ಮೂರು, ಪುರುಷರ ತಂಡ ವಿಭಾಗದಲ್ಲಿ ಮೂರು ಕಂಚು, ಮಹಿಳಾ ತಂಡ ವಿಭಾಗದಲ್ಲಿ ಎರಡು ಕಂಚು, ಪುರುಷರ ಡಬಲ್ಸ್‌, ಮಿಕ್ಸೆಡ್‌ ಡಬಲ್ಸ್‌ನಲ್ಲಿ ತಲಾ ಒಂದು ಪದಕ ಸೇರಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.