| ಹರ್ಮನ್ ಆಟಕ್ಕೆ ಬೆಚ್ಚಿದ ಪಾಕ್, ಸೆಮಿಫೈನಲ್‌ಗೆ ಭಾರತ ಹಾಂಗ್‌ಝೌ: ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರು ಹೊಡೆದ ನಾಲ್ಕು ಗೋಲುಗಳ ಬಲದಿಂದ ಭಾರತ ತಂಡವು ಪುರುಷರ ಹಾಕಿ ತಂಡವು ಪಾಕಿಸ್ತಾನ ಎದುರು ಐತಿಹಾಸಿಕ ಜಯ ದಾಖಲಿಸಿತು. ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು. ಶನಿವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಭಾರತ ತಂಡವು 10–2 ಗೋಲುಗಳಿಂದ ಪಾಕ್ ಎದುರು ಜಯಿಸಿತು. ಇತಿಹಾಸದಲ್ಲಿಯೇ ಭಾರತವು ಪಾಕ್ ಎದುರು ಹೆಚ್ಚು ಗೋಲುಗಳ ಅಂತರದಿಂದ ಜಯಿಸಿದ ಪಂದ್ಯ ಇದಾಗಿದೆ. ಉಭಯ ತಂಡಗಳು ಮುಖಾಮುಖಿಯಾದ 180ನೇ ಪಂದ್ಯ ಇದಾಗಿದೆ. 2017ರಲ್ಲಿ ಭಾರತ ತಂಡವು ಪಾಕ್ ಎದುರು 7–1ರಿಂದ ಜಯಿಸಿದ್ದು ದೊಡ್ಡ ಅಂತರದ ದಾಖಲೆಯಾಗಿತ್ತು. 1982ರಲ್ಲಿ ದೆಹಲಿಯಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲಿ ಪಾಕ್ ತಂಡವೂ 7–1 ರಿಂದ ಜಯಿಸಿತ್ತು. ಹರ್ಮನ್‌ಪ್ರೀತ್ ಸಿಂಗ್ (11ನೇ ನಿಮಿಷ, 17ನಿ, 33ನಿ ಮತ್ತು 34ನಿ) ಅವರು ಹೊಡೆದ ಗೋಲುಗಳಿಂದಾಗಿ ಭಾರತ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಅಲ್ಲದೇ ವರುಣ್ ಕುಮಾರ್ (41ನಿ ಮತ್ತು 54ನಿ) ಕೂಡ ಎರಡು ಗೋಲು ಹೊಡೆದರು. ಮನದೀಪ್ ಸಿಂಗ್ (8ನಿ), ಸುಮಿತ್ (30ನಿ), ಶಂಶೇರ್ ಸಿಂಗ್ (46ನಿ) ಮತ್ತು ಲಲಿತ್‌ ಕುಮಾರ್ ಉಪಾಧ್ಯಾಯ (49ನಿ) ಗೋಲು ಹೊಡೆದರು. ಪ್ರತ್ಯುತ್ತರವಾಗಿ ಪಾಕಿಸ್ತಾನ ತಂಡದ ಮೊಹಮ್ಮದ್ ಖಾನ್ (38ನಿ) ಮತ್ತು ಅಬ್ದುಲ್ ರಾಣಾ (45ನಿ) ಗೋಲು ಗಳಿಸಿದರು. ಇದರಿಂದಾಗಿ ಪಾಕ್ ತಂಡದ ಸೋಲಿನ ಅಂತರ ಕಡಿಮೆಯಾಯಿತಷ್ಟೇ. ಎ ಗುಂಪಿನಲ್ಲಿ ಸತತ ನಾಲ್ಕನೇ ಜಯ ಸಾಧಿಸಿದ ಹರ್ಮನ್‌ಪ್ರೀತ್ ಬಳಗವು 12 ಅಂಕ ಕಲೆಹಾಕಿತು. ಮಂಗಳವಾರ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಭಾರತವು ಬಾಂಗ್ಲಾದೇಶವನ್ನು ಎದುರಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.